ಬೆಂಗಳೂರು: ರಾಜಧಾನಿಯ ಬಿ.ಟಿ.ಎಂ. ಲೇಔಟ್ ವಿಧಾನಸಭಾ ಕ್ಷೇತ್ರದ ಕೋರಮಂಗಲದಲ್ಲಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ (ಕಸ ರಸ ಕೇಂದ್ರ) ನೂತನವಾಗಿ ನಿರ್ಮಿಸಲಾಗಿರುವ ‘ಘನತ್ಯಾಜ್ಯ ಕಲಿಕಾ ಕೇಂದ್ರ’ ಹಾಗೂ ನಗರದ ಪ್ರಪ್ರಥಮ ‘ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್’ ಅನ್ನು ಶಾಸಕ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ಸಮ್ಮುಖದಲ್ಲಿ ಇಂದು ಲೋಕಾರ್ಪಣೆಗೊಳಿಸಲಾಯಿತು.
ಲ್ಯಾಂಡ್‌ಫಿಲ್ ಮುಕ್ತ ನಗರಕ್ಕೆ ಸರ್ಕ್ಯುಲರ್ ಟೆಕ್ಸ್‌ಟೈಲ್ ಲ್ಯಾಬ್
ಗಾರ್ಮೆಂಟ್ಸ್ ಹಾಗೂ ಟೈಲರಿಂಗ್ ಅಂಗಡಿಗಳಿಂದ ಹೊರಬರುವ ವಸ್ತ್ರ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ‘ಲ್ಯಾಂಡ್‌ಫಿಲ್ ಮುಕ್ತ ನಗರ’ ನಿರ್ಮಿಸುವ ಪ್ರಮುಖ ಗುರಿ ಹೊಂದಲಾಗಿದೆ. ಬಟ್ಟೆ ಚಿಂದಿಗಳಿಂದ ಬ್ಯಾಗ್, ವ್ಯಾಲೆಟ್ ಹಾಗೂ ಬೆಡ್‌ಶೀಟ್‌ಗಳಂತಹ ಉಪಯುಕ್ತ ವಸ್ತುಗಳನ್ನು ತಯಾರಿಸಿ, ಸ್ಥಳೀಯರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸಲಾಗುತ್ತಿದೆ. ಇದಲ್ಲದೆ, ಹಳೆಯ ಹಾಸಿಗೆಗಳಿಂದ ನಾರು ಬೇರ್ಪಡಿಸುವುದು ಮತ್ತು ಥರ್ಮಾಕೋಲ್ ಕರಗಿಸಿ ಗಟ್ಟಿ ಪದಾರ್ಥವನ್ನಾಗಿಸಿ ದೆಹಲಿಗೆ ಕಳುಹಿಸಿ, ಫೋಟೋ ಫ್ರೇಮ್‌ಗಳನ್ನು ತಯಾರಿಸುವ ವಿಶೇಷ ವ್ಯವಸ್ಥೆಯನ್ನು ಈ ಘಟಕ ಒಳಗೊಂಡಿದೆ.
ಸಾರ್ವಜನಿಕರಿಗೆ ತರಬೇತಿ ಮತ್ತು ಪ್ರಾಯೋಗಿಕ ಶಿಕ್ಷಣ
ಘನತ್ಯಾಜ್ಯ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು, ಅಪಾರ್ಟ್‌ಮೆಂಟ್ ನಿವಾಸಿಗಳು, ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಇಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಈ ಶೈಕ್ಷಣಿಕ ಕಾರ್ಯಕ್ರಮಕ್ಕೆ ಆರ್‌ವಿ ಶಿಕ್ಷಣ ಸಂಸ್ಥೆ ಸೇರಿದಂತೆ ಹಲವು ಸಂಸ್ಥೆಗಳು ಕೈಜೋಡಿಸಿವೆ.
ಕಸದಿಂದ ಬಯೋಗ್ಯಾಸ್ ಇಂಧನ ಉತ್ಪಾದನೆ
ಪ್ರತಿದಿನ 13 ಟನ್ ಹಸಿ ಕಸವನ್ನು ಸಂಸ್ಕರಿಸುವ ಸಾಮರ್ಥ್ಯದ ‘ಬಯೋ-ಮಿಥನೈಸೇಷನ್’ ಘಟಕ ಸ್ಥಾಪಿಸಲಾಗಿದ್ದು, ಇಲ್ಲಿ ಉತ್ಪಾದನೆಯಾಗುವ ಬಯೋಗ್ಯಾಸ್ ಅನ್ನು ಸುತ್ತಮುತ್ತಲಿನ ಹೋಟೆಲ್‌ಗಳಿಗೆ ಇಂಧನವಾಗಿ ಪೂರೈಸಲಾಗುವುದು. ತ್ಯಾಜ್ಯ ಸಾಗಣೆಯನ್ನು ಸುಲಭಗೊಳಿಸಲು 25 ಟನ್ ಸಾಮರ್ಥ್ಯದ ಮಿನಿ ಟ್ರಾನ್ಸ್‌ಫರ್ ಸ್ಟೇಷನ್ ವ್ಯವಸ್ಥೆಯನ್ನು ಸಹ ರೂಪಿಸಲಾಗಿದೆ.
ಮನೆ ಬಾಗಿಲಲ್ಲೇ ಬೃಹತ್ ತ್ಯಾಜ್ಯ ಸಂಗ್ರಹಣೆ
ಕ್ಷೇತ್ರದ ನಾಗರಿಕರಿಗೆ ಅನುಕೂಲವಾಗುವಂತೆ ಹಳೆಯ ಸೋಫಾ, ಮಂಚ, ಮೇಜು ಮುಂತಾದ ಭಾರೀ ಗಾತ್ರದ (ಬಲ್ಕ್) ತ್ಯಾಜ್ಯವನ್ನು ನೇರವಾಗಿ ಮನೆ ಬಾಗಿಲಿನಿಂದಲೇ ಸಂಗ್ರಹಿಸುವ ನೂತನ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ, ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್, ಬಿಎಸ್‌ಡಬ್ಲ್ಯೂಎಂಎಲ್ (BSWML) ಸಿಇಒ ಕರೀಗೌಡ, ಶಶಿಕಲಾ, ಮಾಜಿ ಪಾಲಿಕೆ ಸದಸ್ಯರಾದ ಚಂದ್ರಪ್ಪ, ಗೋವರ್ಧನ ರೆಡ್ಡಿ, ಪದ್ಮಶ್ರೀ ಬಲರಾಮ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.




