ನವದೆಹಲಿ / ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಸಂಸ್ಥೆಯು ಚಾಲ್ತಿಯಲ್ಲಿರುವ ನಿಯಮಗಳನ್ನು ಮೀರಿ ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದೆ ಹಾಗೂ ಕಾನೂನುಬಾಹಿರವಾಗಿ ಮನಿ ಲೆಂಡಿಂಗ್ ದಂಧೆಯಲ್ಲಿ ತೊಡಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರು ಹೊರಿಸಿರುವ ಆರೋಪಗಳಲ್ಲಿ ಯಾವುದೇ ವಾಸ್ತವಾಂಶವಾಗಲಿ, ಬಲವಾದ ಆಧಾರಗಳಾಗಲಿ ಇಲ್ಲ ಎಂದು ಸ್ಪಷ್ಟಪಡಿಸಿದ ಅತ್ಯುನ್ನತ ನ್ಯಾಯಾಲಯವು ವಿಚಾರಣೆಯನ್ನು ವಜಾಗೊಳಿಸಿ ಆದೇಶಿಸಿದೆ.
ವಿವಾದದ ಹಿನ್ನೆಲೆ
ನಾಗರಿಕ ಸೇವಾ ಟ್ರಸ್ಟ್ನ ರಂಜನ್ ರಾವ್ ಯೆರ್ದೂರ್ ಅವರು ಎಸ್ಕೆಡಿಆರ್ಡಿಪಿ ಸಂಸ್ಥೆಯು ಅನುಮತಿ ಇಲ್ಲದೆ ಬಡ್ಡಿ ವ್ಯವಹಾರ ನಡೆಸುತ್ತಿದೆ, ಮನಿ ಲೆಂಡರ್ಸ್ ಕಾಯ್ದೆಯ ಅಡಿಯಲ್ಲಿ ಉಲ್ಲಂಘನೆ ಎಸಗಿದೆ ಮತ್ತು ಜನರಿಗೆ ವಂಚನೆ (IPC 420) ಮಾಡುತ್ತಿದೆ ಎಂದು ಆಪಾದಿಸಿ ಈ ಹಿಂದೆ ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಆದರೆ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯವು, ಅರ್ಜಿದಾರರಿಗೂ ಸಂಸ್ಥೆಯ ವ್ಯವಹಾರಕ್ಕೂ ಯಾವುದೇ ನೇರ ಸಂಬಂಧವಿಲ್ಲ ಹಾಗೂ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದು ದೂರನ್ನು ವಜಾಗೊಳಿಸಿತ್ತು.
ಹೈಕೋರ್ಟ್ನಿಂದ ಸುಪ್ರೀಂ ಕೋರ್ಟ್ವರೆಗೆ ಐತಿಹಾಸಿಕ ಜಯ
ಅಧೀನ ನ್ಯಾಯಾಲಯದ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಎಸ್ಕೆಡಿಆರ್ಡಿಪಿ ಸಂಸ್ಥೆಯು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಹೈಕೋರ್ಟ್, 2026ರ ಜನವರಿ 9 ರಂದು ರಂಜನ್ ರಾವ್ ಅವರು ಸಲ್ಲಿಸಿದ್ದ ದೂರನ್ನು ಸಂಪೂರ್ಣವಾಗಿ ರದ್ದುಗೊಳಿಸಿ (Quash) ಸಂಸ್ಥೆಯ ಪರವಾಗಿ ತೀರ್ಪು ನೀಡಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಂಜನ್ ರಾವ್ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ರಜಾ ಅರ್ಜಿ (SLP Crl No. 10752/2026) ಸಲ್ಲಿಸಿದ್ದರು. ಈ ಅರ್ಜಿಯ ಸುದೀರ್ಘ ಪರಿಶೀಲನೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ, ಅರ್ಜಿದಾರರ ಬಳಿ ತಮ್ಮ ಆರೋಪವನ್ನು ಸಮರ್ಥಿಸಲು ಸೂಕ್ತ ದಾಖಲೆಗಳಿಲ್ಲದಿರುವುದನ್ನು ಎತ್ತಿ ತೋರಿಸಿ, ಮೇಲ್ಮನವಿ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿ ಎಸ್ಕೆಡಿಆರ್ಡಿಪಿ ಸಂಸ್ಥೆಗೆ ಜಯ ತಂದಿತ್ತಿದೆ.




