ವಿಮಾನದಲ್ಲಿ ಮುದ್ದಿನ ಪ್ರಾಣಿಗಳ ಹಾರಾಟ: ಅಕಾಸಾ ಏರ್ ಸೇವೆಯಲ್ಲಿ ಬೆಂಗಳೂರು ನಂಬರ್ 1

ಬೆಂಗಳೂರು: ತಮ್ಮ ಮುದ್ದಿನ ಶ್ವಾನ ಹಾಗೂ ಬೆಕ್ಕುಗಳೊಂದಿಗೆ ಗಗನಯಾನ ಮಾಡುವ ಪ್ರವೃತ್ತಿ ದೇಶದಲ್ಲಿ ಹೆಚ್ಚುತ್ತಿದ್ದು, ಈ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಪ್ರಥಮ ಸ್ಥಾನ ಪಡೆದುಕೊಂಡಿದೆ. ಪ್ರಮುಖ ವಿಮಾನಯಾನ ಸಂಸ್ಥೆ ಅಕಾಸಾ ಏರ್ ಪರಿಚಯಿಸಿರುವ ‘ಪೆಟ್ಸ್ ಆನ್ ಅಕಾಸಾ’ ಯೋಜನೆಯಲ್ಲಿ ದೇಶದ ಅತಿ ದೊಡ್ಡ ಕಾರ್ಯಾಚರಣಾ ತಾಣವಾಗಿ ಬೆಂಗಳೂರು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಬೆಂಗಳೂರಿನಿಂದಲೇ ಮೂರನೇ ಒಂದು ಭಾಗ ಸಂಚಾರ

ಸಂಸ್ಥೆಯು ಈ ವಿಶಿಷ್ಟ ಸೌಲಭ್ಯವನ್ನು ಶುರುಮಾಡಿದ ನಂತರ ಬೆಂಗಳೂರು ವಿಮಾನ ನಿಲ್ದಾಣದಿಂದಲೇ ಬರೊಬ್ಬರಿ 3,700ಕ್ಕೂ ಅಧಿಕ ಸಾಕುಪ್ರಾಣಿಗಳು ವಿವಿಧ ನಗರಗಳಿಗೆ ಯಾನ ಬೆಳೆಸಿವೆ. ಅಕಾಸಾ ಏರ್‌ನ ಒಟ್ಟು ಹಾರಾಟ ಜಾಲದಲ್ಲಿ ನಡೆದಿರುವ ಪೆಟ್ ಪ್ರಯಾಣಗಳ ಪೈಕಿ ಶೇಕಡಾ 30ಕ್ಕಿಂತ ಹೆಚ್ಚಿನ ಪಾಲು ಬೆಂಗಳೂರಿಗರಿಂದಲೇ ಬಂದಿದೆ. 2024ರ ಆರ್ಥಿಕ ವರ್ಷದಲ್ಲಿ ರಾಜಧಾನಿಯಿಂದ 856 ಪ್ರಾಣಿಗಳು ಹಾರಾಟ ನಡೆಸಿದ್ದರೆ, 2026ರ ಆರ್ಥಿಕ ಸಾಲಿನಲ್ಲಿ ಈ ಪ್ರಮಾಣ 1,310ಕ್ಕೆ ತಲುಪಿ ಶೇಕಡಾ 53ರಷ್ಟು ಭರ್ಜರಿ ಏರಿಕೆ ಕಂಡಿದೆ.

ಟಾಪ್ ಪೆಟ್ ಪೇರೆಂಟ್ಸ್ ಹಾಗೂ ಜನಪ್ರಿಯ ಮಾರ್ಗಗಳು

ದೇಶದಲ್ಲೇ ಅತಿ ಹೆಚ್ಚು ಬಾರಿ ಸಾಕುಪ್ರಾಣಿಗಳೊಂದಿಗೆ ಹಾರಾಟ ನಡೆಸಿದ ಮೊದಲ ಹತ್ತು ಗ್ರಾಹಕರ ಪೈಕಿ ಐವರು ಬೆಂಗಳೂರಿನವರೇ ಆಗಿರುವುದು ನಗರದ ಪ್ರಾಣಿಪ್ರಿಯತೆಯ ನಿದರ್ಶನವಾಗಿದೆ. ಪ್ರಯಾಣ ಮಾರ್ಗಗಳಲ್ಲಿ ಬೆಂಗಳೂರಿನಿಂದ ದೆಹಲಿ, ಕೋಲ್ಕತ್ತಾ ಮತ್ತು ಗುವಾಹಟಿಗೆ ತೆರಳುವ ವಿಮಾನಗಳಿಗೆ ಅತ್ಯಧಿಕ ಬೇಡಿಕೆ ವ್ಯಕ್ತವಾಗಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ನಗರದಿಂದ ದಾಖಲಾದ ಒಟ್ಟಾರೆ ಪೆಟ್ ಯಾನಗಳಲ್ಲಿ ಶೇಕಡಾ 55ಕ್ಕಿಂತ ಹೆಚ್ಚಿನ ಪಾಲು ಈ ಮೂರು ನಗರಗಳ ನಡುವೆಯೇ ಜರುಗಿದೆ.

16 ನಗರಗಳಿಗೆ ವಿಸ್ತೃತ ಸಂಪರ್ಕ

ಆರಂಭದಲ್ಲಿ ಕೇವಲ 10 ನಗರಗಳಿಗೆ ಸೀಮಿತವಾಗಿದ್ದ ಬೆಂಗಳೂರಿನಿಂದ ಪೆಟ್ ಪ್ರಯಾಣದ ವ್ಯಾಪ್ತಿ ಈಗ 16 ಪ್ರಮುಖ ತಾಣಗಳಿಗೆ ಹರಡಿಕೊಂಡಿದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಅಹಮದಾಬಾದ್, ಗುವಾಹಟಿ ಜತೆಗೆ ಭುವನೇಶ್ವರ, ಪುಣೆ, ಲಖನೌ, ಕೊಚ್ಚಿ, ವಾರಾಣಸಿ, ದರ್ಬಂಗಾ ಹಾಗೂ ಕ್ಯಾಲಿಕಟ್ ಮಾರ್ಗಗಳಲ್ಲೂ ಸಾಕುಪ್ರಾಣಿಗಳೊಂದಿಗೆ ಪ್ರಯಾಣ ಬೆಳೆಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.

ದೇಶಾದ್ಯಂತ 13,500 ಪ್ರಾಣಿಗಳ ಯಾನ, ವಿಶೇಷ ಸೌಕರ್ಯಗಳೇನು?

2022ರ ನವೆಂಬರ್ 1 ರಂದು ಅಸ್ತಿತ್ವಕ್ಕೆ ಬಂದ ಈ ಸೇವೆಯಡಿ ಅಕಾಸಾ ಏರ್ ಇದುವರೆಗೆ ಒಟ್ಟಾರೆಯಾಗಿ 13,500ಕ್ಕೂ ಅಧಿಕ ಶ್ವಾನ ಹಾಗೂ ಬೆಕ್ಕುಗಳನ್ನು ದೇಶದ 28 ನಗರಗಳಿಗೆ ಸುರಕ್ಷಿತವಾಗಿ ಸಾಗಿಸಿದೆ. ತೂಕದ ಮಾನದಂಡದ ಮೇಲೆ ಪ್ರಾಣಿಗಳನ್ನು ಕ್ಯಾಬಿನ್ ಅಥವಾ ಕಾರ್ಗೋ ವಿಭಾಗದಲ್ಲಿ ಕೊಂಡೊಯ್ಯಲಾಗುತ್ತದೆ.

ಕ್ಯಾಬಿನ್ ಪ್ರಯಾಣಕ್ಕಾಗಿ ಕ್ಯಾರಿಯರ್ ಸಮೇತ 10 ಕೆಜಿ ಗರಿಷ್ಠ ತೂಕದ ಮಿತಿಯಿದ್ದು, ಪ್ರತಿ ವಿಮಾನದಲ್ಲಿ ಮೂರು ಪ್ರಾಣಿಗಳಿಗೆ ಆಸನ ಕಾಯ್ದಿರಿಸಲು ಅವಕಾಶವಿದೆ. ಸುಲಭ ಬುಕಿಂಗ್ ವಿಧಾನ, ಕನಿಷ್ಠ ನಿಬಂಧನೆಗಳ ಆರೋಗ್ಯ ದೃಢೀಕರಣ ಪತ್ರದ ವ್ಯವಸ್ಥೆ, ಉಚಿತ ವಿಂಡೋ ಆಸನ, ಪ್ರತ್ಯೇಕ ಚೆಕ್-ಇನ್ ಮತ್ತು ಬೋರ್ಡಿಂಗ್ ಸವಲತ್ತುಗಳನ್ನು ನೀಡಲಾಗುತ್ತಿದೆ. ಜತೆಗೆ ಪ್ರಯಾಣದ ಉದ್ದಕ್ಕೂ ಪ್ರಾಣಿಗಳ ಆರೋಗ್ಯ ಹಾಗೂ ಭದ್ರತೆ ಕಾಪಾಡಲು ವಿಮಾನ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.