ಸೌಜನ್ಯ ಪ್ರಕರಣ; SIT ವರದಿಗೆ ಮೂರು ತಿಂಗಳ ಗಡುವು

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣದ ಮರುತನಿಖೆಗಾಗಿ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಎನ್. ಶಶಿಕುಮಾರ್ ನೇತೃತ್ವದಲ್ಲಿ ಎಸ್‌ಐಟಿ ಕಾರ್ಯನಿರ್ವಹಿಸಲಿದ್ದು, ಮೂರು ತಿಂಗಳ ಕಾಲಮಿತಿಯಲ್ಲಿ ಸಮಗ್ರ ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಕಾನೂನು ಪ್ರಕಾರ ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿದೆ.

ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿಯಲ್ಲಿ ಎನ್. ಶಶಿಕುಮಾರ್ ಮುಖ್ಯಸ್ಥರಾಗಿದ್ದು, ಮಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತಚರ ವಿಭಾಗದ ಎಸ್‌ಪಿ ನಿಶಾ ಜೇಮ್ಸ್, ಸಿಐಡಿ ಎಸ್‌ಪಿ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಸದಸ್ಯರಾಗಿದ್ದಾರೆ.

ಎಸ್‌ಐಟಿಗೆ ಕರ್ನಾಟಕ ರಾಜ್ಯ ವ್ಯಾಪ್ತಿಯಲ್ಲಿ ತನಿಖೆ ನಡೆಸುವ ಅಧಿಕಾರ ನೀಡಲಾಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸಂಬಂಧಿತ provisions ಅಡಿಯಲ್ಲಿ ತಂಡವನ್ನು ರಚಿಸಲಾಗಿದೆ. ತಂಡವು ತನಿಖೆ ಪೂರ್ಣಗೊಂಡ ಬಳಿಕ ಸಮರ್ಥ ನ್ಯಾಯಾಲಯಕ್ಕೆ ಪೊಲೀಸ್ ವರದಿ ಸಲ್ಲಿಸುವ ಅಧಿಕಾರವನ್ನೂ ಹೊಂದಿರಲಿದೆ.

ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಅವರು ಪ್ರಕರಣದ ಮರುತನಿಖೆ ಕೋರಿ ನಡೆಸಿದ ಕಾನೂನು ಹೋರಾಟದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ರಂದು ಹೊಸದಾಗಿ ತನಿಖೆ ನಡೆಸುವಂತೆ ನಿರ್ದೇಶನ ನೀಡಿತ್ತು. ಹಿಂದಿನ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊಸ ತನಿಖಾ ತಂಡದಲ್ಲಿ ಸೇರಿಸಬಾರದು ಎಂದೂ ನ್ಯಾಯಾಲಯ ಸೂಚಿಸಿತ್ತು.

ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಪೊಲೀಸ್ ವರದಿ ಸಲ್ಲಿಸುವಂತೆ ನ್ಯಾಯಾಲಯ ಗಡುವು ವಿಧಿಸಿದೆ. ಹೀಗಾಗಿ ಹೊಸ ಎಸ್‌ಐಟಿ ತನಿಖೆ ಇದೀಗ ಪ್ರಕರಣದ ಮುಂದಿನ ಪ್ರಮುಖ ಹಂತವಾಗಲಿದೆ.