ಟೆಕ್ ಲೋಕದಲ್ಲಿ ಸಂಚಲನ: ಎನ್‌ವಿಡಿಯಾ CEO ಹುದ್ದೆಗೆ ಜೆನ್ಸನ್ ಹುವಾಂಗ್ ದಿಢೀರ್ ರಾಜೀನಾಮೆ | Jensen Huang

Sensation in the tech world Jensen Huang abruptly resigns as NVIDIA CEO

ಸ್ಯಾನ್ ಫ್ರಾನ್ಸಿಸ್ಕೊ: ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಐ (AI) ತಂತ್ರಜ್ಞಾನ ಕ್ಷೇತ್ರದ ಅಗ್ರಗಣ್ಯ ಸಂಸ್ಥೆ ಎನ್‌ವಿಡಿಯಾದಲ್ಲಿ (Nvidia) ಅನಿರೀಕ್ಷಿತ ನಾಯಕತ್ವ ಬದಲಾವಣೆಯಾಗಿದೆ. ಕಂಪನಿಯ ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹಾಗೂ ಆಡಳಿತ ಮಂಡಳಿಯ ಸದಸ್ಯ ಸ್ಥಾನಗಳಿಗೆ ಜೆನ್ಸನ್ ಹುವಾಂಗ್ (Jensen Huang) ವಿದಾಯ ಹೇಳಿದ್ದಾರೆ. ಅವರ ರಾಜೀನಾಮೆ ತಕ್ಷಣದಿಂದಲೇ ಜಾರಿಗೆ ಬಂದಿರುವುದಾಗಿ ಕಂಪನಿಯ ಆಡಳಿತ ಮಂಡಳಿ ಗುರುವಾರ ಸ್ಪಷ್ಟಪಡಿಸಿದೆ. ಆ ಮೂಲಕ ಎನ್‌ವಿಡಿಯಾ CEO ಹುದ್ದೆಗೆ ಜೆನ್ಸನ್ ಹುವಾಂಗ್(Jensen Huang) ದಿಢೀರ್ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ.

ಕೊಲೆಟ್ ಕ್ರೆಸ್ ಹೆಗಲಿಗೆ ಹಂಗಾಮಿ ಸಿಇಒ ಹೊಣೆ

ಹುವಾಂಗ್ ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ, ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮತ್ತು ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ಸೇವೆ ಸಲ್ಲಿಸುತ್ತಿರುವ ಕೊಲೆಟ್ ಕ್ರೆಸ್ (Colette Kress) ಅವರನ್ನು ಹಂಗಾಮಿ ಸಿಇಒ ಆಗಿ ನೇಮಿಸಲಾಗಿದೆ. ಕಾಯಂ ಸಿಇಒ ನೇಮಕವಾಗುವವರೆಗೂ ಕ್ರೆಸ್ ಅವರು ಸಿಎಫ್‌ಒ ಜವಾಬ್ದಾರಿಯ ಜೊತೆಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ನೂತನ ಸಿಇಒ ಆಯ್ಕೆಗಾಗಿ ಆಡಳಿತ ಮಂಡಳಿಯು ಈಗಾಗಲೇ ಶೋಧ ಆರಂಭಿಸಿದ್ದು, ಕಂಪನಿಯ ಒಳಗಿನ ಹಾಗೂ ಹೊರಗಿನ ಸಮರ್ಥ ಅಭ್ಯರ್ಥಿಗಳನ್ನು ಪರಿಗಣಿಸಲು ನಿರ್ಧರಿಸಿದೆ.

ಕೊಲೆಟ್ ಕ್ರೆಸ್ ಅವರ ಅನುಭವ:

2013ರ ಸೆಪ್ಟೆಂಬರ್‌ನಲ್ಲಿ ಎನ್‌ವಿಡಿಯಾ ಸೇರಿದ ಕೊಲೆಟ್ ಕ್ರೆಸ್, ಕಳೆದ 13 ವರ್ಷಗಳಿಂದ ಕಂಪನಿಯ ಆರ್ಥಿಕ ವಿಭಾಗವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಇದಕ್ಕೂ ಮುನ್ನ ಅವರು ಮೈಕ್ರೋಸಾಫ್ಟ್ (Microsoft) ಮತ್ತು ಸಿಸ್ಕೋ (Cisco) ನಂತಹ ಜಾಗತಿಕ ಟೆಕ್ ದಿಗ್ಗಜ ಸಂಸ್ಥೆಗಳ ಹಣಕಾಸು ವಿಭಾಗಗಳಲ್ಲಿ ಸುಮಾರು 25 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸುದೀರ್ಘ ಅನುಭವ ಹೊಂದಿದ್ದಾರೆ.