ನವದೆಹಲಿ: ಮುಂಬರುವ ಹಬ್ಬದ ಋತುವಿನಲ್ಲಿ ( Festive Season ) ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಬೃಹತ್ ಕಾರ್ಯಾಚರಣೆ ಆರಂಭಿಸಿದೆ. ಈ ಹಿನ್ನಲೆಯಲ್ಲಿ ಎವರೆಸ್ಟ್ನ ಜೀರಿಗೆ ಪುಡಿಯ ( Everest Cumin Powder ) ನಿರ್ದಿಷ್ಟ ಬ್ಯಾಚ್ ಅನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯಲು ಆದೇಶಿಸಿದೆ.
ಗ್ರಾಹಕರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ದೇಶಾದ್ಯಂತ ತಪಾಸಣೆ ತೀವ್ರಗೊಳಿಸಿರುವ ಪ್ರಾಧಿಕಾರ, ಪ್ರಮುಖ ಆಹಾರ ಉತ್ಪಾದನಾ ಕಂಪನಿಗಳಿಗೆ ಬಿಸಿ ಮುಟ್ಟಿಸಿದೆ. ಹೆಸರಾಂತ ಮಸಾಲೆ ಪದಾರ್ಥ ತಯಾರಿಕಾ ಸಂಸ್ಥೆ ಎವರೆಸ್ಟ್ನ ಜೀರಿಗೆ ಪುಡಿಯ ( Everest Cumin Powder ) ನಿರ್ದಿಷ್ಟ ಬ್ಯಾಚ್ ಅನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯಲು ಸೂಚಿಸಲಾಗಿದ್ದು, ನೆಸ್ಲೆ ಇಂಡಿಯಾದ ಡೇರಿ ವೈಟ್ನರ್ ಉತ್ಪನ್ನದ ಮೇಲೂ ಗಂಭೀರ ಕ್ರಮ ಕೈಗೊಳ್ಳಲಾಗಿದೆ.
ಜೀರಿಗೆ ಪುಡಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಕೀಟನಾಶಕ ಪತ್ತೆ
ಗೋವಾದ ಪ್ರತಿಷ್ಠಿತ ರೆಸಾರ್ಟ್ ಒಂದರಿಂದ ಸಂಗ್ರಹಿಸಲಾಗಿದ್ದ ಎವರೆಸ್ಟ್ ಕಂಪನಿಯ ಪ್ಯಾಕ್ ಮಾಡಲಾದ ಜೀರಿಗೆ ಪುಡಿಯನ್ನು (Cumin Powder) ಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ನಿಗದಿತ ಗರಿಷ್ಠ ಮಿತಿಗಿಂತ ಅತ್ಯಧಿಕ ಪ್ರಮಾಣದಲ್ಲಿ ‘ಅಜೋಕ್ಸಿಸ್ಟ್ರೋಬಿನ್’ (Azoxystrobin) ಹಾಗೂ ‘ಥಯಾಮೆಥೊಕ್ಸಮ್’ (Thiamethoxam) ಕೀಟನಾಶಕಗಳ ಅಂಶ ಪತ್ತೆಯಾಗಿದೆ.
ಆಹಾರ ಸುರಕ್ಷತಾ ಕಾಯ್ದೆಯಡಿ ಇದು ಮಾನವ ಬಳಕೆಗೆ ಸಂಪೂರ್ಣ ಅಸುರಕ್ಷಿತ ಎಂದು ಲ್ಯಾಬ್ ವರದಿ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಬ್ಯಾಚ್ ಸಂಖ್ಯೆ E080668761 ನ ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಕೂಡಲೇ ವಾಪಸ್ ಪಡೆಯಲು FSSAI ಆದೇಶಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ನಿಗದಿತ ಕಾಲಮಿತಿಯೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಕಂಪನಿಗೆ ಸ್ಪಷ್ಟ ನಿರ್ದೇಶನ ನೀಡಿದೆ.
FSSAI continues to enforce strict regulatory compliance to safeguard consumer health across the country:
1️⃣ Licence Suspended: FSSAI licence of M/s Creative Bakers and Confectioners Pvt. Ltd. has been suspended with immediate effect due to severe hygiene deficiencies. (1)2 pic.twitter.com/i4yy2phThN— FSSAI (@fssaiindia) October 4, 2026
ನೆಸ್ಲೆ ‘ಲೋ-ಫ್ಯಾಟ್ ಡೇರಿ ವೈಟ್ನರ್’ ಕಳಪೆ: ಹೋಟೆಲ್ಗೆ ನೋಟಿಸ್
ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿರುವ ಪ್ರಸಿದ್ಧ ‘ದಿ ಲಲಿತ್’ ಹೋಟೆಲ್ನಲ್ಲಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಅಲ್ಲಿ ಬಳಕೆಯಾಗುತ್ತಿದ್ದ ನೆಸ್ಲೆ ಇಂಡಿಯಾದ ‘ಲೋ-ಫ್ಯಾಟ್ ಡೇರಿ ವೈಟ್ನರ್’ ಮಾದರಿಯನ್ನು ವಶಕ್ಕೆ ಪಡೆದಿದ್ದರು. ಈ ಉತ್ಪನ್ನವು ಗುಣಮಟ್ಟದ ಮಾನದಂಡಗಳನ್ನು ಪಾಲಿಸಿಲ್ಲ ಹಾಗೂ ಆಹಾರ ಸುರಕ್ಷತಾ ಕಾಯ್ದೆ-2006 ರ ನಿಯಮಗಳನ್ನು ಉಲ್ಲಂಘಿಸಿರುವುದು ಪರೀಕ್ಷೆಯಲ್ಲಿ ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಹೋಟೆಲ್ ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ನೆಸ್ಲೆ ಇಂಡಿಯಾ, ತಾವು ಸರ್ಕಾರದ ಎಲ್ಲಾ ಗುಣಮಟ್ಟದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ತಮ್ಮ ಉತ್ಪನ್ನವು ಸೇವನೆಗೆ ಸಂಪೂರ್ಣ ಯೋಗ್ಯವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ನೈರ್ಮಲ್ಯ ಕೊರತೆ: ಬೇಕರಿ ಪರವಾನಗಿ ಅಮಾನತು
ತಪಾಸಣೆಯ ಮತ್ತೊಂದು ಭಾಗವಾಗಿ, ತೀವ್ರ ನೈರ್ಮಲ್ಯ ಲೋಪ ಹಾಗೂ ಅಸ್ವಚ್ಛತೆಯ ಕಾರಣದಿಂದ ‘ಕ್ರಿಯೇಟಿವ್ ಬೇಕರ್ಸ್ ಅಂಡ್ ಕನ್ಫೆಕ್ಷನರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಆಹಾರ ಪರವಾನಗಿಯನ್ನು (FSSAI Licence) ನಿಯಂತ್ರಕ ಮಂಡಳಿ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ಹಬ್ಬದ ದಿನಗಳಲ್ಲಿ ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಹಾಗೂ ನಿಯಮ ಉಲ್ಲಂಘಿಸುವ ಕಂಪನಿಗಳ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ ನೀಡಿದೆ.




