ರಾಜ್ಯ ಬಿಜೆಪಿಯಲ್ಲಿ ವದಂತಿಗಳಿಗೆ ತೆರೆ: ಬಿ.ವೈ.ವಿಜಯೇಂದ್ರ ನಾಯಕತ್ವದಲ್ಲೇ ಚುನಾವಣೆ ಎದುರಿಸಲು ಹೈಕಮಾಂಡ್ ನಿರ್ಧಾರ | B Y Vijayendra

End to rumors within the state BJP High command decides to face elections under the leadership of B Y Vijayendra

ಬೆಂಗಳೂರು: ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರ(Karnataka State BJP President) ಬದಲಾವಣೆ ಕುರಿತು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಎಲ್ಲಾ ಊಹಾಪೋಹಗಳಿಗೂ ಕೊನೆಗೂ ತೆರೆಬಿದ್ದಿದೆ. ಮುಂಬರುವ ಚುನಾವಣೆಗಳನ್ನು ಪ್ರಸ್ತುತ ರಾಜ್ಯಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ(B Y Vijayendra) ಅವರ ಅಧ್ಯಕ್ಷತೆಯಲ್ಲೇ ಎದುರಿಸಲು ಬಿಜೆಪಿ ಕೇಂದ್ರ ನಾಯಕತ್ವ ಅಂತಿಮ ತೀರ್ಮಾನ ಕೈಗೊಂಡಿದೆ ಎಂದು ಪಕ್ಷದ ಅತ್ಯುನ್ನತ ಮೂಲಗಳು ಖಚಿತಪಡಿಸಿವೆ.

ಮುಂಬರುವ ಸಾಲು ಸಾಲು ಚುನಾವಣೆಗಳು ಅತ್ಯಂತ ನಿರ್ಣಾಯಕವಾಗಿರುವುದರಿಂದ, ಈ ಹಂತದಲ್ಲಿ ನಾಯಕತ್ವ ಬದಲಾವಣೆ ಎಂಬ ಸಾಹಸಕ್ಕೆ ಕೈಹಾಕಲು ವರಿಷ್ಠರು ಇಷ್ಟಪಡುತ್ತಿಲ್ಲ. “ಚುನಾವಣೆ ಮುಗಿಯುವವರೆಗೆ ಯಾವುದೇ ಬದಲಾವಣೆಗಳಿಲ್ಲ, ಹಾಲಿ ಇರುವ ನಾಯಕತ್ವವೇ ಮುಂದುವರಿಯಲಿದೆ” ಎಂಬ ನೂತನ ತಂತ್ರಗಾರಿಕೆಯನ್ನು ರೂಪಿಸಿರುವ ಬಿಜೆಪಿ ಹೈಕಮಾಂಡ್, ನಾಯಕರ ಸಾಮರ್ಥ್ಯ ಮತ್ತು ಸಾಧನೆಯ ಆಧಾರದ ಮೇಲಷ್ಟೇ ಮುಂದಿನ ದಿನಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ.

ಲಿಂಗಾಯತ ಮತಬ್ಯಾಂಕ್ ಕಾಯ್ದುಕೊಳ್ಳುವ ತಂತ್ರ:

ವರಿಷ್ಠರ ಈ ತೀರ್ಮಾನದ ಹಿಂದೆ ಗಂಭೀರ ರಾಜಕೀಯ ಲೆಕ್ಕಾಚಾರಗಳು ಅಡಗಿವೆ. ರಾಜ್ಯದ ಪ್ರಭಾವಿ ಲಿಂಗಾಯತ ಸಮುದಾಯದ ಬೆಂಬಲವನ್ನು ಉಳಿಸಿಕೊಳ್ಳುವುದು ಪಕ್ಷಕ್ಕೆ ಅತ್ಯಂತ ಅಗತ್ಯವಾಗಿದೆ. ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಪಕ್ಕಕ್ಕೆ ಸರಿಸಿದಾಗ ಪಕ್ಷ ಅನುಭವಿಸಿದ ರಾಜಕೀಯ ಹಿನ್ನಡೆಯನ್ನು ಮತ್ತೊಮ್ಮೆ ಎದುರಿಸಲು ಹೈಕಮಾಂಡ್ ತಯಾರಿಲ್ಲ. ಒಂದೊಮ್ಮೆ ವಿಜಯೇಂದ್ರ ಅವರನ್ನು ಸ್ಥಾನದಿಂದ ತೆಗೆದುಹಾಕಿದರೆ ಯಡಿಯೂರಪ್ಪ ಬೆಂಬಲಿತ ಬಣದಲ್ಲಿ ತೀವ್ರ ಅಸಮಾಧಾನ ಸೃಷ್ಟಿಯಾಗಿ, ಸಾಂಪ್ರದಾಯಿಕವಾಗಿ ಬಿಜೆಪಿಗೆ ಬೆಂಬಲವಾಗಿರುವ ಲಿಂಗಾಯತ ಮತಗಳು ಕಾಂಗ್ರೆಸ್ ಕಡೆಗೆ ವಾಲಬಹುದು ಎಂಬ ಭೀತಿ ಬಿಜೆಪಿ(BJP) ವರಿಷ್ಠರಲ್ಲಿದೆ.

ಪರ್ಯಾಯ ನಾಯಕತ್ವದ ಕೊರತೆ ಮತ್ತು ಬಣ ಗೊಂದಲ:

ರಾಜ್ಯ ಘಟಕದಲ್ಲಿ ಸರ್ವಸಮ್ಮತ ಪರ್ಯಾಯ ನಾಯಕನ ಕೊರತೆ ಇರುವುದು ಹಾಗೂ ನಾಯಕರ ನಡುವಿನ ಬಣ ಶೀತಲ ಸಮರವೂ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ. ವಿಜಯೇಂದ್ರ ಅವರ ಬದಲಿಗೆ ಬೇರೆ ಯಾವುದೇ ನಾಯಕನಿಗೆ ಜವಾಬ್ದಾರಿ ನೀಡಿದರೂ, ಮತ್ತೊಂದು ಬಣ ಬಹಿರಂಗವಾಗಿ ಅಸಮಾಧಾನ ಅಥವಾ ಬಂಡಾಯ ಎತ್ತುವ ಸಾಧ್ಯತೆಯಿದೆ. ಇಂತಹ ಆಂತರಿಕ ಗೊಂದಲಗಳು ಪಕ್ಷದ ಚುನಾವಣಾ ತಯಾರಿಗೆ ಹೊಡೆತ ನೀಡಬಾರದು ಎಂಬ ಕಾರಣಕ್ಕೆ ಹೈಕಮಾಂಡ್ ಬದಲಾವಣೆಯ ಆಲೋಚನೆಯನ್ನು ಕೈಬಿಟ್ಟಿದೆ.

ಸಂಘಟನಾ ಸಾಮರ್ಥ್ಯಕ್ಕೆ ಹೈಕಮಾಂಡ್ ಮೆಚ್ಚುಗೆ:

ಮತ್ತೊಂದೆಡೆ, ಬಿ.ವೈ ವಿಜಯೇಂದ್ರ(B Y Vijayendra) ಅವರ ನೇತೃತ್ವದಲ್ಲಿ ಪಕ್ಷದ ಸಂಘಟನಾತ್ಮಕ ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂಬ ಆಂತರಿಕ ವರದಿಗಳು ಕೇಂದ್ರ ನಾಯಕರಿಗೆ ತಲುಪಿವೆ. ಅದರಲ್ಲೂ ವಿಶೇಷವಾಗಿ ತಳಮಟ್ಟದ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಮಾಡಲು ಅವರು ಕೈಗೊಂಡಿರುವ ಕ್ರಮಗಳ ಬಗ್ಗೆ ವರಿಷ್ಠರು ತೃಪ್ತಿ ವ್ಯಕ್ತಪಡಿಸಿದ್ದಾರೆ.

ಚುನಾವಣೆಗಳು ತೀರಾ ಹತ್ತಿರದಲ್ಲಿರುವುದರಿಂದ ಈಗ ಹೊಸಬರಿಗೆ ಅಧ್ಯಕ್ಷ ಪಟ್ಟ ನೀಡಿದರೆ ಅವರು ಪಕ್ಷವನ್ನು ಅರ್ಥೈಸಿಕೊಂಡು ಸಂಘಟನೆ ಕಟ್ಟಲು ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಹೀಗಾಗಿ ಹಾಲಿ ಇರುವ ಪರಿಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನೇ ಮುಂದುವರಿಸುವುದು ಪಕ್ಷದ ಚುನಾವಣಾ ಹಿತದೃಷ್ಟಿಯಿಂದ ಸೂಕ್ತ ಎಂಬ ನಿಲುವಿಗೆ ಬಿಜೆಪಿ ಹೈಕಮಾಂಡ್ ಬಂದಿದೆ.