ಇನ್ಮುಂದೆ ರಾತ್ರಿ ವೇಳೆ ರೈಲುಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಬಂದ್‌: ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಆದೇಶ | Railway Department

Charging points in trains to be switched off at night Strict directive from the Railway Department

ನವದೆಹಲಿ: ರೈಲು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಹಾಗೂ ಬೆಂಕಿ ಅವಘಡಗಳನ್ನು ತಪ್ಪಿಸುವ ದೃಷ್ಟಿಯಿಂದ, ರೈಲುಗಳಲ್ಲಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸುವಂತೆ ಭಾರತೀಯ ರೈಲ್ವೆ ಮಂಡಳಿ (Railway Board) ಎಲ್ಲಾ ವಲಯಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆ ಮೂಲಕ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಇಲಾಖೆ(Railway Department) ಮಹತ್ವದ ಕ್ರಮ ಕೈಗೊಂಡಿದೆ.

ಆದೇಶಕ್ಕೆ ಕಾರಣವಾದ ಪವರ್ ಬ್ಯಾಂಕ್ ಸ್ಫೋಟ

ಇತ್ತೀಚೆಗೆ ಮುಂಬೈ ಲೋಕಲ್ ರೈಲಿನ ಕೋಚ್‌ನಲ್ಲಿ ಚಾರ್ಜ್‌ಗೆ ಇಟ್ಟಿದ್ದ ಪವರ್ ಬ್ಯಾಂಕ್ ದಿಢೀರನೆ ಸ್ಫೋಟಗೊಂಡ ಪರಿಣಾಮ ಬೋಗಿಯ ತುಂಬ ದಟ್ಟವಾದ ಹೊಗೆ ಆವರಿಸಿ ಪ್ರಯಾಣಿಕರಲ್ಲಿ ಭಾರಿ ಭೀತಿ ಮೂಡಿಸಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲವಾದರೂ, ರೈಲ್ವೆ ಇಲಾಖೆ(Railway Department) ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.

ಯಾವುದೇ ವಿನಾಯಿತಿ ಇಲ್ಲ, ಸಿಬ್ಬಂದಿಗೆ ಎಚ್ಚರಿಕೆ

ಅಕ್ಟೋಬರ್ 26 ರಂದು ರೈಲ್ವೆ ಮಂಡಳಿಯು ಎಲ್ಲಾ ವಲಯ ರೈಲ್ವೆಗಳಿಗೆ ಅಧಿಕೃತ ಸುತ್ತೋಲೆ ರವಾನಿಸಿದ್ದು, ಈ ನಿಯಮ ಪಾಲನೆಯಲ್ಲಿ ಯಾವುದೇ ರೀತಿಯ ವಿನಾಯಿತಿಗೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ. ಈ ಹಿಂದೆ ನಿಯಮ ಜಾರಿಯಲ್ಲಿದ್ದರೂ ಹಲವು ಕಡೆ ಸಿಬ್ಬಂದಿ ನಿಗದಿತ ಅವಧಿಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಸ್ವಿಚ್ ಆಫ್ ಮಾಡಲು ವಿಫಲರಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ವಿಶೇಷ ತರಬೇತಿ ಹಾಗೂ ಸೂಚನೆ ನೀಡಲು ಮತ್ತು ನಿಯಮ ಉಲ್ಲಂಘಿಸುವ ಸಿಬ್ಬಂದಿಯನ್ನು ನೇರ ಹೊಣೆಗಾರರನ್ನಾಗಿ ಮಾಡಲು ಸೂಚಿಸಲಾಗಿದೆ.

ಅನಿರೀಕ್ಷಿತ ತಪಾಸಣೆಗೆ ನಿರ್ದೇಶನ

ರಾತ್ರಿ ವೇಳೆಯಲ್ಲಿ 6 ಗಂಟೆಗಳ ಕಾಲ (ರಾತ್ರಿ 11 ರಿಂದ ಮುಂಜಾನೆ 5 ರವರೆಗೆ) ಚಾರ್ಜಿಂಗ್ ಪಾಯಿಂಟ್‌ಗಳು ಸಂಪೂರ್ಣ ಬಂದ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಮೇಲ್ವಿಚಾರಕರು ರೈಲುಗಳಲ್ಲಿ ಅನಿರೀಕ್ಷಿತ ತಪಾಸಣೆ (Surprise Inspections) ನಡೆಸಲಿದ್ದಾರೆ. ಪ್ರಯಾಣಿಕರು ನಿದ್ರಿಸುತ್ತಿರುವ ಸಮಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅಥವಾ ಮೊಬೈಲ್/ಪವರ್ ಬ್ಯಾಂಕ್ ಬಿಸಿಯಾಗಿ ಹೊಗೆಯಾಡಿದರೆ ತಕ್ಷಣಕ್ಕೆ ಗಮನಕ್ಕೆ ಬಾರದೆ ದೊಡ್ಡ ದುರಂತಗಳು ಸಂಭವಿಸುವ ಅಪಾಯವಿರುತ್ತದೆ. ಆದ್ದರಿಂದ ಸುರಕ್ಷತಾ ಕ್ರಮವಾಗಿ ಈ ನಿರ್ಧಾರವನ್ನು ಬಿಗಿಗೊಳಿಸಲಾಗಿದೆ.

ಪ್ರಯಾಣಿಕರಿಗೆ ಸಲಹೆ

ರಾತ್ರಿ ವೇಳೆ ಪ್ರಯಾಣಿಸುವ ಸಾರ್ವಜನಿಕರು ರೈಲು ಹತ್ತುವ ಮುನ್ನವೇ ತಮ್ಮ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಅಗತ್ಯ ಎಲೆಕ್ಟ್ರಾನಿಕ್ ಸಾಧನಗಳನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ. ಪ್ರಯಾಣದ ವೇಳೆ ಯಾವುದೇ ಸಾಧನವು ಅತಿಯಾಗಿ ಬಿಸಿಯಾದರೆ ಅಥವಾ ಹೊಗೆ ಕಾಣಿಸಿಕೊಂಡರೆ ತಕ್ಷಣವೇ ಬೋಗಿಯ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ