ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ಎನ್ನುವಂತೆ ತುಟ್ಟಿಭತ್ಯೆ ಹೆಚ್ಚಳ(Dearness Allowance) ಮಾಡಿ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ನೌಕರರ ತುಟ್ಟಿಭತ್ಯೆ (Dearness Allowance – DA) ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು (Dearness Relief – DR) ಶೇಕಡಾ 3ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಶೇ. 60 ರಿಂದ ಶೇ. 63ಕ್ಕೆ ಏರಿಕೆ
ಈ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯು(Dearness Allowance) ಪ್ರಸ್ತುತ ಇರುವ ಶೇಕಡಾ 60ರಿಂದ ಶೇಕಡಾ 63ಕ್ಕೆ ಏರಿಕೆಯಾಗಲಿದೆ. ಇದಕ್ಕೂ ಮುನ್ನ ಸರ್ಕಾರವು 2026ರ ಜನವರಿ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು ಶೇ. 60ಕ್ಕೆ ಪರಿಷ್ಕರಿಸಿತ್ತು. ಇದೀಗ ಹಬ್ಬದ ಋತುವಿನಲ್ಲಿ ಘೋಷಣೆಯಾಗಿರುವ ಈ ಹೆಚ್ಚುವರಿ ಶೇ. 3ರಷ್ಟು ಏರಿಕೆಯು ನೌಕರರ ಮೂಲ ವೇತನದ (Basic Pay) ಆಧಾರದ ಮೇಲೆ ಅನ್ವಯವಾಗಲಿದ್ದು, ಮಾಸಿಕ ವೇತನದಲ್ಲಿ ಗಣನೀಯ ಏರಿಕೆ ತರಲಿದೆ.
ಜುಲೈ 1ರಿಂದ ಪೂರ್ವಾನ್ವಯ, ಬಾಕಿ ಹಣ ಪಾವತಿ
ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಹೀಗಾಗಿ, ಕಳೆದ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಬಾಕಿ ಮೊತ್ತವು (Arrears) ನೌಕರರ ಮತ್ತು ಪಿಂಚಣಿದಾರರ ಖಾತೆಗೆ ಜಮೆಯಾಗಲಿದೆ. ಇದರೊಂದಿಗೆ ತುಟ್ಟಿಭತ್ಯೆಯ ಆಧಾರದ ಮೇಲೆ ಲೆಕ್ಕಹಾಕಲಾಗುವ ಸಾರಿಗೆ ಭತ್ಯೆ (Transport Allowance) ಮುಂತಾದ ಇತರ ಭತ್ಯೆಗಳಲ್ಲೂ ಹೆಚ್ಚಳವಾಗಲಿದೆ.
ಕೋಟಿಗೂ ಅಧಿಕ ನೌಕರರು, ಪಿಂಚಣಿದಾರರಿಗೆ ಅನುಕೂಲ
ಬೆಲೆ ಏರಿಕೆ ಹಾಗೂ ಹಣದುಬ್ಬರವನ್ನು ಸರಿದೂಗಿಸುವ ಉದ್ದೇಶದಿಂದ 7ನೇ ವೇತನ ಆಯೋಗದ ಶಿಫಾರಸಿನ ಸೂತ್ರದ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 50 ಲಕ್ಷಕ್ಕೂ ಅಧಿಕ ಹಾಲಿ ನೌಕರರು ಹಾಗೂ 65 ಲಕ್ಷಕ್ಕೂ ಹೆಚ್ಚು ನಿವೃತ್ತ ಪಿಂಚಣಿದಾರರು (ರಕ್ಷಣಾ ಮತ್ತು ರೈಲ್ವೆ ಪಿಂಚಣಿದಾರರು ಸೇರಿದಂತೆ) ನೇರ ಪ್ರಯೋಜನ ಪಡೆಯಲಿದ್ದಾರೆ. ಹಬ್ಬದ ಸಂದರ್ಭದಲ್ಲೇ ಹೆಚ್ಚುವರಿ ಹಣ ಕೈಸೇರುತ್ತಿರುವುದು ನೌಕರರ ವಲಯದಲ್ಲಿ ಸಂತಸ ಮೂಡಿಸಿದೆ




