ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು( Nandini Milk Price) ಪ್ರತಿ ಲೀಟರ್‌ಗೆ ಅನ್ವಯವಾಗುವಂತೆ ₹8 ಹೆಚ್ಚಳ ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಗುರುವಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಪರಿಷ್ಕೃತ ನಂದಿನಿ ಹಾಲಿನ ದರವು( Nandini Milk Price) ನವೆಂಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.
ರೈತರ ಪ್ರೋತ್ಸಾಹಧನಕ್ಕೆ ಅಧಿಕ ಪಾಲು ಹಂಚಿಕೆ
ಗ್ರಾಹಕರ ಮೇಲೆ ಹೊರೆಯಾಗುವ ₹8 ದರ ಏರಿಕೆಯಲ್ಲಿ ಸಿಂಹಪಾಲನ್ನು ಹಾಲು ಉತ್ಪಾದಕ ರೈತರಿಗೆ ನೇರವಾಗಿ ತಲುಪಿಸಲು ಸರ್ಕಾರ ತೀರ್ಮಾನಿಸಿದೆ. ಹೆಚ್ಚಿಸಲಾದ ಒಟ್ಟು ಮೊತ್ತದಲ್ಲಿ ₹7 ಅನ್ನು ರೈತರಿಗೆ ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದ್ದು, ಉಳಿದ ₹1 ಹೆಚ್ಚುವರಿ ಮೊತ್ತವನ್ನು ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚಕ್ಕೆ ಮೀಸಲಿಡಲಾಗಿದೆ.
ಬಮುಲ್ ವ್ಯಾಪ್ತಿಯ ಹೈನುಗಾರರ ಆದಾಯದಲ್ಲಿ ಹೆಚ್ಚಳ
ಸರ್ಕಾರದ ಈ ನಿರ್ಧಾರದಿಂದಾಗಿ ಬೆಂಗಳೂರು ಹಾಲು ಒಕ್ಕೂಟ (ಬಮುಲ್) ವ್ಯಾಪ್ತಿಯ ರೈತರಿಗೆ ನೀಡಲಾಗುತ್ತಿದ್ದ ಖರೀದಿ ದರದಲ್ಲಿ ಗಮನಾರ್ಹ ಏರಿಕೆಯಾಗಲಿದೆ. ಪ್ರಸ್ತುತ ರೈತರಿಗೆ ಪ್ರತಿ ಲೀಟರ್ ಹಾಲಿಗೆ ₹33 ರಿಂದ ₹35 ಸಿಗುತ್ತಿದ್ದು, ಹೊಸ ದರ ಜಾರಿಯಾದ ಬಳಿಕ ಈ ಮೊತ್ತ ₹40 ರಿಂದ ₹42 ಕ್ಕೆ ಏರಿಕೆಯಾಗಲಿದೆ. ಇದರಿಂದ ರಾಜ್ಯದ ಲಕ್ಷಾಂತರ ಹೈನುಗಾರರ ಆದಾಯ ವೃದ್ಧಿಯಾಗಲಿದ್ದು, ಆರ್ಥಿಕವಾಗಿ ಹೆಚ್ಚಿನ ನೆರವು ಸಿಗಲಿದೆ.
ಹಲವು ತಿಂಗಳ ಹಾಲು ಒಕ್ಕೂಟಗಳ ಬೇಡಿಕೆಗೆ ಮನ್ನಣೆ
ಪಶು ಆಹಾರದ ದರ ಏರಿಕೆ ಹಾಗೂ ಹೈನುಗಾರಿಕೆ ನಿರ್ವಹಣಾ ವೆಚ್ಚ ಅಧಿಕವಾದ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಿಸುವಂತೆ ವಿವಿಧ ಹಾಲು ಒಕ್ಕೂಟಗಳು ಹಲವು ತಿಂಗಳುಗಳಿಂದ ಸರ್ಕಾರಕ್ಕೆ ನಿರಂತರ ಒತ್ತಾಯ ತರುತ್ತಿದ್ದವು. ಈ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಕಳೆದ ತಿಂಗಳಷ್ಟೇ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಸಚಿವ ಸಂಪುಟವು ಅಂತಿಮವಾಗಿ ದರ ಪರಿಷ್ಕರಣೆಗೆ ಹಸಿರು ನಿಶಾನೆ ತೋರಿದೆ.




