ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಬ್ದ ಮತ್ತು ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ರಾಜ್ಯಾದ್ಯಂತ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
2026ರ ನವೆಂಬರ್ 8ರಿಂದ 10ರವರೆಗೆ ದೀಪಾವಳಿ ಆಚರಣೆ ನಡೆಯಲಿದ್ದು, ಈ ಅವಧಿಯಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ಪಟಾಕಿಗಳ ಸ್ಫೋಟದಿಂದ ಉಂಟಾಗುವ ಶಬ್ದ ಮತ್ತು ವಾಯು ಮಾಲಿನ್ಯ ಸಾರ್ವಜನಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.
ನಿಷೇಧಿತ ಪಟಾಕಿ ದಾಸ್ತಾನು ಮಾಡಿದರೆ ಗೋದಾಮು ಮುಟ್ಟುಗೋಲು
ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶಗಳನ್ನು ತಮ್ಮ ಅಧೀನ ಅಧಿಕಾರಿಗಳ ಗಮನಕ್ಕೆ ತಂದು ಕಟ್ಟುನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಪರಿಸರ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಆಸಕ್ತ ನಾಗರಿಕರು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ಈ ಕಾರ್ಯಪಡೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು. ಹಸಿರು ಪಟಾಕಿಗಳನ್ನು ಹೊರತುಪಡಿಸಿ ನಿಷೇಧಿತ ಪಟಾಕಿಗಳನ್ನು ದಾಸ್ತಾನು ಮಾಡಿರುವುದು ಕಂಡುಬಂದರೆ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ನಿರ್ದೇಶಿಸಲಾಗಿದೆ.

ಹಸಿರು ಪಟಾಕಿ ಗುರುತು, ಕ್ಯೂಆರ್ ಕೋಡ್ ಕಡ್ಡಾಯ
ಹಸಿರು ಪಟಾಕಿಗಳ ಮೇಲೆ ಹಾಗೂ ಅವುಗಳ ಪ್ಯಾಕೆಟ್ಗಳ ಮೇಲೆ ಹಸಿರು ಪಟಾಕಿಯ ಅಧಿಕೃತ ಚಿಹ್ನೆ ಮತ್ತು ಕ್ಯೂಆರ್ ಕೋಡ್ ಇರಬೇಕು. ಈ ಗುರುತುಗಳ ನೈಜತೆಯನ್ನು ಜಿಲ್ಲಾ ಪರಿಸರ ಅಧಿಕಾರಿಗಳಿಂದ ಖಚಿತಪಡಿಸಿಕೊಳ್ಳಬೇಕು. ಅಧಿಕೃತ ಚಿಹ್ನೆ ಇಲ್ಲದ ಪಟಾಕಿಗಳನ್ನು ಹಸಿರು ಪಟಾಕಿಗಳೆಂದು ಪರಿಗಣಿಸುವಂತಿಲ್ಲ. ಅಂತಹ ಪಟಾಕಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಪಟಾಕಿ ಸಿಡಿಸುವಾಗ ಪ್ರಾಣಿಗಳು, ಪಕ್ಷಿಗಳು, ಮಕ್ಕಳು ಹಾಗೂ ವೃದ್ಧರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಬಳಿ ಪಟಾಕಿ ನಿಷೇಧ
ಸ್ಥಳೀಯ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಇತರ ನಿಷೇಧಿತ ಪ್ರದೇಶಗಳ ಸುತ್ತಮುತ್ತ ಯಾವುದೇ ರೀತಿಯ ಪಟಾಕಿಗಳನ್ನು ಸಿಡಿಸಲು ಅಥವಾ ಬಳಸಲು ಅವಕಾಶವಿರುವುದಿಲ್ಲ. ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.
ಮೆಟ್ರೋ, ರೈಲು ಮತ್ತು ಬಸ್ ನಿಲ್ದಾಣಗಳು, ಮಾಲ್ಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಹಂಚಬೇಕು. ವಿಡಿಯೋ ಮತ್ತು ಆಡಿಯೋ ಸಂದೇಶಗಳ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಕುರಿತು ಜಾಗೃತಿ ಮೂಡಿಸಬೇಕು. ಸ್ಥಳೀಯ ಟಿವಿ ಮತ್ತು ರೇಡಿಯೋಗಳ ಮೂಲಕವೂ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಸೂಚಿಸಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸ್ಥಳೀಯ ಸಂಸ್ಥೆಗಳು ಸೂಕ್ತ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.
ಅಕ್ರಮ ಸಾಗಾಟದ ವಿರುದ್ಧವೂ ಕ್ರಮ
ಹೊರರಾಜ್ಯಗಳಿಂದ ನಿಷೇಧಿತ ಪಟಾಕಿಗಳನ್ನು ಅಕ್ರಮವಾಗಿ ಸಾಗಾಟ ಮಾಡುವುದನ್ನು ತಡೆಯಲು ರಾಜ್ಯದ ಗಡಿಗಳಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆಯ ತನಿಖಾ ಠಾಣೆಗಳ ಮೂಲಕ ಪರಿಶೀಲನೆ ನಡೆಸಬೇಕು. ನಿಷೇಧಿತ ಪಟಾಕಿಗಳು ಹಾಗೂ ಸಂಬಂಧಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಸಾಗಾಟಕ್ಕೆ ಬಳಸುವ ವಾಹನಗಳನ್ನು ಸಾರಿಗೆ ಇಲಾಖೆಯ ಮೂಲಕ ವಶಪಡಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಹಕಾರ ಪಡೆಯಬಹುದು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ
ಪಟಾಕಿಗಳನ್ನು ಸಿಡಿಸಲು ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶವಿದ್ದು, ಉಳಿದ ಸಮಯದಲ್ಲಿ ಪಟಾಕಿ ಸ್ಫೋಟಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ. ನಿಗದಿತ ಸಮಯದ ನಿಯಮವನ್ನು ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.


