ಬೆಂಗಳೂರು: ಹಾಲಿನ ದರ ಹೆಚ್ಚಳದ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸಲು ಕೆಎಂಎಫ್ ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದರು.
ರಾಜ್ಯ ಸರ್ಕಾರದ ನಿರ್ಧಾರದಿಂದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರತಿ ಲೀಟರ್ ಹಾಲಿನ ಖರೀದಿ ದರದಲ್ಲಿ ರೈತರಿಗೆ ₹7 ಹೆಚ್ಚಳ ಮಾಡಲಾಗಿದೆ. ಗ್ರಾಹಕರಿಗೆ ಅನ್ವಯಿಸುವ ಎಂಆರ್ಪಿ ದರದಲ್ಲಿಯೂ ಪ್ರತಿ ಲೀಟರ್ಗೆ ₹8 ಏರಿಕೆ ಮಾಡಲಾಗಿದೆ.

ಈ ನಿರ್ಧಾರದಿಂದ ರಾಜ್ಯದ ಸುಮಾರು 11 ಲಕ್ಷ ಹೈನುಗಾರ ರೈತ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಅವರ ಆರ್ಥಿಕ ಸಬಲೀಕರಣಕ್ಕೆ ನೆರವಾಗಲಿದೆ ಎಂದು ಹಾಲು ಒಕ್ಕೂಟಗಳ ಪ್ರತಿನಿಧಿಗಳು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಲಕ್ಷ್ಮಣ ಸವದಿ, ಪುಟ್ಟರಂಗಶೆಟ್ಟಿ, ಶಾಸಕರಾದ ಕೆ.ವೈ. ನಂಜೇಗೌಡ, ಸಿ.ಪಿ. ಯೋಗೇಶ್ವರ್, ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಜಿ.ಸಿ. ಚಂದ್ರಶೇಖರ್ ಸೇರಿದಂತೆ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.



