ಕಠ್ಮಂಡು: ನೇಪಾಳದ ಸೋಲುಖುಂಬು ಜಿಲ್ಲೆಯಲ್ಲಿ ಎರಡು ಹೆಲಿಕಾಪ್ಟರ್‌ಗಳ ನಡುವೆ ಡಿಕ್ಕಿ ಸಂಭವಿಸಿ ಓರ್ವ ವಿದೇಶಿ ಪ್ರಜೆ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆ 8.15ರ ಸುಮಾರಿಗೆ ಫೆರೆಚೆ ಹೆಲಿಪ್ಯಾಡ್‌ನಲ್ಲಿ ಈ ಘಟನೆ ನಡೆದಿದೆ.
ಫಿಶ್‌ಟೇಲ್ ಏರ್ ಮತ್ತು ಡೈನಾಸ್ಟಿ ಏರ್ ಸಂಸ್ಥೆಗಳಿಗೆ ಸೇರಿದ ಹೆಲಿಕಾಪ್ಟರ್‌ಗಳು ಇಳಿಯುವ ಸಂದರ್ಭದಲ್ಲಿ ಅವುಗಳ ರೋಟರ್ ಬ್ಲೇಡ್‌ಗಳು ಪರಸ್ಪರ ತಗುಲಿದ್ದರಿಂದ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.

ಗಾಯಾಳುವನ್ನು ಪ್ರಭು ಏರ್ ಹೆಲಿಕಾಪ್ಟರ್ ಮೂಲಕ ಲುಕ್ಲಾಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಮೃತ ವ್ಯಕ್ತಿ ಮತ್ತು ಗಾಯಾಳುವಿನ ಗುರುತು ಇನ್ನೂ ಪತ್ತೆಯಾಗಿಲ್ಲ. ಎರಡೂ ಹೆಲಿಕಾಪ್ಟರ್‌ಗಳಲ್ಲಿ ಎಷ್ಟು ಮಂದಿ ಇದ್ದರು ಎಂಬ ಮಾಹಿತಿಯೂ ಲಭ್ಯವಾಗಿಲ್ಲ.
ಮೌಂಟ್ ಎವರೆಸ್ಟ್ ಪ್ರದೇಶದಲ್ಲಿ ಪ್ರವಾಸಿಗರ ಸಾಗಣೆ ಹಾಗೂ ರಕ್ಷಣಾ ಕಾರ್ಯಾಚರಣೆಗಳಿಗೆ ಹೆಲಿಕಾಪ್ಟರ್‌ಗಳ ಬಳಕೆ ಸಾಮಾನ್ಯವಾಗಿದೆ.



