ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ 10ನೇ ಆವೃತ್ತಿಯ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗಿದ್ದು, ಸರಯೂ ನದಿಯ 56 ಘಾಟ್ಗಳಲ್ಲಿ 30 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ವಿಶ್ವದಾಖಲೆ ನಿರ್ಮಿಸಲಾಗಿದೆ.
ದೀಪೋತ್ಸವದ ಸಿದ್ಧತೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಭಾಗವಹಿಸಿದ್ದರು. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಎನ್ಸಿಸಿ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ದೀಪಗಳ ವ್ಯವಸ್ಥೆ ಮಾಡಿದರು.
ಸರಯೂ ನದಿ ತೀರದಲ್ಲಿ 2,151 ವೇದಾಚಾರ್ಯರು ಮತ್ತು ಪೂಜಾರಿಗಳಿಂದ ಮಹಾ ಆರತಿ ನೆರವೇರಿಸಲಾಯಿತು. ಸ್ಥಳೀಯವಾಗಿ ನಿರ್ಮಿಸಿದ 2,100 ಡ್ರೋನ್ಗಳ ಮೂಲಕ ಆಕಾಶದಲ್ಲಿ ರಾಮಾಯಣದ ಸನ್ನಿವೇಶಗಳನ್ನು ಪ್ರದರ್ಶಿಸಲಾಯಿತು. 12 ವೇದಿಕೆಗಳಲ್ಲಿ ಸುಮಾರು 2,500 ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ನೇಪಾಳ, ಶ್ರೀಲಂಕಾ, ಥಾಯ್ಲೆಂಡ್, ಲಾವೋಸ್ ಮತ್ತು ದಕ್ಷಿಣ ಆಫ್ರಿಕಾದ ಕಲಾವಿದರು ಅಂತರರಾಷ್ಟ್ರೀಯ ರಾಮಲೀಲಾ ಪ್ರದರ್ಶನ ನೀಡಿದರು. ಎಂಟು ನಿಮಿಷಗಳ ಲೇಸರ್ ಶೋ, 20 ನಿಮಿಷಗಳ ಪ್ರೊಜೆಕ್ಷನ್ ಮ್ಯಾಪಿಂಗ್, ರಾಮಾಯಣ ಆಧಾರಿತ 22 ಸ್ತಬ್ಧಚಿತ್ರಗಳ ಮೆರವಣಿಗೆ ಹಾಗೂ ಸಂಗೀತಮಯ ಪಟಾಕಿ ಪ್ರದರ್ಶನ ಉತ್ಸವಕ್ಕೆ ಮೆರುಗು ನೀಡಿದವು.
ಸ್ಥಳೀಯ ಕುಂಬಾರರು ಮತ್ತು ಗ್ರಾಮೀಣ ಕುಶಲಕರ್ಮಿಗಳಿಗೂ ಉತ್ಸವದಿಂದ ಉದ್ಯೋಗಾವಕಾಶ ದೊರೆಯಿತು.
2017ರಲ್ಲಿ 1.71 ಲಕ್ಷ ದೀಪಗಳೊಂದಿಗೆ ಆರಂಭವಾದ ದೀಪೋತ್ಸವದಲ್ಲಿ 2025ರಲ್ಲಿ 26.17 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನೆಸ್ ದಾಖಲೆ ನಿರ್ಮಿಸಲಾಗಿತ್ತು. ಈ ಬಾರಿ 30 ಲಕ್ಷಕ್ಕೂ ಅಧಿಕ ದೀಪಗಳ ಬೆಳಗಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲಾಗಿದೆ.



