‘ಪೊನ್ನೋನಂ–26’ ಸಾಂಸ್ಕೃತಿಕ ಉತ್ಸವ; ಕೇರಳ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆ ಪ್ರಶಸ್ತಿ ಪ್ರದಾನ

ಬೆಂಗಳೂರು: ಕೆಂಗೇರಿಯ ಡಿ.ಎಸ್.ಎ ಭವನದಲ್ಲಿ ಬೆಂಗಳೂರು ಸೌತ್ ವೆಸ್ಟ್ ಕೇರಳ ಸಮಾಜಂ ಆಯೋಜಿಸಿದ್ದ ‘ಪೊನ್ನೋನಂ–26’ ಸಾಂಸ್ಕೃತಿಕ ಉತ್ಸವವನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಸ್.ಇ. ಸುಧೀಂದ್ರ ಮತ್ತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ವೈಷ್ಣವಿ ಸುಧೀಂದ್ರ ಜಂಟಿಯಾಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಇ. ಸುಧೀಂದ್ರ, ಕೇರಳ ಸಮುದಾಯದವರಿಗೆ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು. ಕರ್ನಾಟಕವು ನೆರೆರಾಜ್ಯಗಳೊಂದಿಗೆ ಸೌಹಾರ್ದ ಮತ್ತು ಸಹಕಾರದ ಸಂಬಂಧ ಬೆಳೆಸಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಹೇಳಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ಶ್ಲಾಘಿಸಿದರು. ಕೇರಳ ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಾದ ಈಶ್ವರ್ ಖಂಡ್ರೆ ಮತ್ತು ಶಿವರಾಜ್ ತಂಗಡಗಿ ಅವರ ಸಹಕಾರವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಜಿಯಾ ಮ್ಯಾಥ್ಯೂ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಆದ್ಯಾ ವಿ.ಟಿ. ಅವರಿಗೆ ಶೈಕ್ಷಣಿಕ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ. ವೈಷ್ಣವಿ ಸುಧೀಂದ್ರ ಮಾತನಾಡಿ, ಕರ್ನಾಟಕ ಸರ್ಕಾರದ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಅಧ್ಯಯನ ಮಾಡಲು ರಮೇಶ್ ಚೆನ್ನಿತ್ತಲ ನೇತೃತ್ವದ ಕೇರಳ ಸರ್ಕಾರದ ಉನ್ನತ ಮಟ್ಟದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿರುವುದು ಹೆಮ್ಮೆಯ ಸಂಗತಿ ಎಂದರು. ಕೇರಳ ಸಮುದಾಯದವರು ಕರ್ನಾಟಕವನ್ನು ತಮ್ಮದೇ ರಾಜ್ಯವೆಂದು ಭಾವಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಹೇಳಿದರು.

ಕೇರಳದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಉತ್ಸವಗಳು ವಿವಿಧ ಭಾಷಾ ಸಮುದಾಯಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ ಎಂದರು.

ಸಮಾರಂಭದಲ್ಲಿ ಕೇರಳ ಸಮಾಜಂ ಸೌತ್ ವೆಸ್ಟ್‌ನ ಉಪಾಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಸತೀಶ್ ತೋಟಶ್ಶೇರಿ, ಖಜಾಂಚಿ ಶಿವದಾಸನ್, ಕವಿ ಹಾಗೂ ನಾಟಕಕಾರ ಕಲಿವೆಲ್ಲೂರ್ ಮುರಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.