E20 ಪೆಟ್ರೋಲ್ ಕುರಿತು ಸ್ವತಂತ್ರ ರಾಷ್ಟ್ರವ್ಯಾಪಿ ಪರೀಕ್ಷೆಗೆ ರಿಜ್ವಾನ್ ಅರ್ಷದ್ ಆಗ್ರಹ:

ಬೆಂಗಳೂರು: E20 ಪೆಟ್ರೋಲ್‌ನಲ್ಲಿರುವ ಎಥೆನಾಲ್ ಪ್ರಮಾಣದ ಕುರಿತು ಕರ್ನಾಟಕ ಸರ್ಕಾರ ನಡೆಸಿದ ಪರೀಕ್ಷೆಗಳ ವರದಿಗೆ ಬದ್ಧವಾಗಿದ್ದು, ಗ್ರಾಹಕರಿಗೆ ಪೂರೈಕೆಯಾಗುವ ಇಂಧನದಲ್ಲಿನ ನೈಜ ಎಥೆನಾಲ್ ಪ್ರಮಾಣವನ್ನು ಪತ್ತೆಹಚ್ಚಲು ಸ್ವತಂತ್ರ ರಾಷ್ಟ್ರವ್ಯಾಪಿ ಪರೀಕ್ಷೆ ನಡೆಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಆಗ್ರಹಿಸಿದ್ದಾರೆ.

ಮೋಟಾರ್ ಸ್ಪಿರಿಟ್ ಮತ್ತು ಹೈ ಸ್ಪೀಡ್ ಡೀಸೆಲ್ ಆದೇಶ-2005ರ ಪ್ರಕಾರ ರಾಜ್ಯ ಸರ್ಕಾರ ಮಾದರಿಗಳ ಪರೀಕ್ಷೆ ನಡೆಸಿದೆ. ಆರಂಭಿಕ 63 ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವನ್ನು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ವರದಿ ಮಾಡಿಲ್ಲ ಎಂದು ಸಚಿವರು ಆರೋಪಿಸಿದ್ದಾರೆ. ಹೀಗಾಗಿ ಎನ್‌ಎಬಿಎಲ್ ಮಾನ್ಯತೆ ಪಡೆದ ಹಾಗೂ ಐಎಸ್‌ಒ ಪ್ರಮಾಣೀಕೃತ ಸ್ವತಂತ್ರ ಪ್ರಯೋಗಾಲಯಗಳ ಮೂಲಕ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಗ್ರಾಹಕರಿಗೆ ಪೂರೈಕೆಯಾಗುವ ಪೆಟ್ರೋಲ್‌ನಲ್ಲಿನ ನೈಜ ಎಥೆನಾಲ್ ಪ್ರಮಾಣವೇ ಪ್ರಮುಖ ಪ್ರಶ್ನೆಯಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ಸ್ಪಷ್ಟ ಉತ್ತರ ನೀಡಿಲ್ಲ ಎಂದು ಅವರು ಟೀಕಿಸಿದರು.

ಸಂಸ್ಕರಣಾಗಾರ ಮತ್ತು ಟರ್ಮಿನಲ್‌ಗಳಲ್ಲಿ ಎಥೆನಾಲ್ ಮಿಶ್ರಣ ಪ್ರಕ್ರಿಯೆ ನಡೆಯುವುದರಿಂದ ಇಂಧನದ ಗುಣಮಟ್ಟದ ಹೊಣೆಗಾರಿಕೆಯನ್ನು ತೈಲ ಕಂಪನಿಗಳೇ ವಹಿಸಬೇಕು. ಕಂಪನಿಗಳ ಸ್ವಯಂ ಪ್ರಮಾಣೀಕರಣಕ್ಕಿಂತ ಸ್ವತಂತ್ರ ಪ್ರಯೋಗಾಲಯಗಳ ಪರೀಕ್ಷೆ ಅಗತ್ಯ ಎಂದು ಹೇಳಿದರು.

ಇತರ ರಾಜ್ಯಗಳೂ ಸ್ವತಂತ್ರ ಪರೀಕ್ಷೆ ನಡೆಸಬೇಕು. ಮಾನ್ಯತೆ ಪಡೆದ ಮೂರನೇ ವ್ಯಕ್ತಿಯ ಸಂಸ್ಥೆಗಳ ಮೂಲಕ ದೇಶಾದ್ಯಂತ ಪರೀಕ್ಷೆ ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು. ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಗ್ರಾಹಕರ ಹಕ್ಕುಗಳ ರಕ್ಷಣೆಗೆ ಕರ್ನಾಟಕ ಬದ್ಧವಾಗಿದೆ ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.