ಶಿವಮೊಗ್ಗ: ಬಹುತೇಕ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಕೇಳಿ ಆಲಿಸಿ, ಆಯ್ತು ಮಾಡಿಕೊಡುತ್ತೇನೆ. ಮಾಡಿ ಕೊಡಿಸುತ್ತೇನೆ. ನಾಳೆ ಬನ್ನಿ, ನಾಡಿದ್ದು ಬನ್ನಿ. ನಾಳೆ ಆಗಿಯೇ ಬಿಡುತ್ತದೆ ಎಂದು ಕಳುಹಿಸೋರೇ ಹೆಚ್ಚು. ಆದರೇ ಇವರೆಲ್ಲರಿಗೂ ಈ ಸರ್ಕಾರಿ ಅಧಿಕಾರಿ ಪುಲ್ ಡಿಫರೆಂಟ್. ಸಾರ್ವಜನಿಕರ ಸಮಸ್ಯೆಗಳನ್ನು ಡೈರಿಯಲ್ಲಿ ನೋಟ್ ಮಾಡಿಕೊಂಡು, ಅದನ್ನು ಫಾಲೋಅಪ್ ಮಾಡಿ, ಕ್ಲಿಯರ್ ಮಾಡಿಸಿಕೊಡೋ ಸಾಗರ ತಹಶೀಲ್ದಾರ್(Sagara Tahsildar Dr Pratibha) ಇವರು. ಅದು ಯಾರು? ಯಾವ ಊರಲ್ಲಿದ್ದಾರೆ ಅನ್ನೋ ಬಗ್ಗೆ ಮುಂದೆ ಓದಿ…
ಇದು ಹೊಗಳಿಕೆಯಾಗಿ ಬರೆದ ವರದಿಯಲ್ಲ. ತಹಶೀಲ್ದಾರ್ ಮುಂದೆಯೋ ಒಂದಷ್ಟು ಗಂಟೆಗಳ ಕಾಲ ಕುಳಿತು ಕಂಡ ಕಾರ್ಯವೈಖರಿಯ ವರದಿ. ತಹಶೀಲ್ದಾರ್ ಬಳಿಯಲ್ಲಿ ತರಾವರಿ ಸಮಸ್ಯೆ ಹೊತ್ತು ಬರುವಂತ ಜನರನ್ನು ಮಾತುಗಳನ್ನು ಸಾವಧಾನದಿಂದ ಆಲಿಸುವಂತ ಅವರು, ಅದನ್ನು ತಾನೆಲ್ಲಿ ಮರೆತು ಹೋಗಿ ಬಿಡ್ತಿನೋ ಅಂತ ಡೈರಿಯೊಂದರಲ್ಲಿ ಬರೆದುಕೊಂಡು ಬಿಡುವ ಪರಿಯನ್ನು ಕಂಡ ಸತ್ಯದ ದರ್ಶನದ ಸುದ್ದಿ.
ಇಷ್ಟಕ್ಕೇ ಸುಮ್ಮನಾಗದಂತ ಅವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕರೆದು, ತನ್ನಲ್ಲಿ ಬಂದ ವ್ಯಕ್ತಿಯ ಅರ್ಜಿ, ಅದಕ್ಕೆ ಸಂಬಂಧಿಸಿದಂತ ಫೈಲ್ ತರಿಸಿಕೊಂಡು ಪರಿಶೀಲಿಸಿ, ಸ್ಥಳದಲ್ಲಿಯೇ ಪರಿಹರಿಸೋದಕ್ಕೆ ಸೂಚಿಸುವ ಕಾರ್ಯವೈಖರಿ ಅವರಲ್ಲಿ ಕಂಡ ಚುರುಕು ಕಾರ್ಯವೈಖರಿಯ ಪರಿ.
ಹೀಗೆ ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರೋರು ಬೇರೆ ಯಾರು ಅಲ್ಲ. ಶಿವಮೊಗ್ಗ ಜಿಲ್ಲೆಯ ಸಾಗರದ ತಹಶೀಲ್ದಾರ್ ಡಾ.ಪ್ರತಿಭಾ.ಆರ್ ಎಂಬುವರಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಸಾಗರ ತಹಶೀಲ್ದಾರ್ ಆಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಡಾ.ಪ್ರತಿಭಾ, ಜನರ ಕಷ್ಟಗಳಿಗೆ, ಸಾರ್ವಜನಿಕರ ಸಮಸ್ಯೆ ನಿವಾರಿಸುವಲ್ಲಿ ನಿರತರಾಗಿದ್ದಾರೆ.
ಸರ್ಕಾರಿ ಕಚೇರಿಯ ಶಾರ್ಪ್ ಸಮಯಕ್ಕೆಲ್ಲ ತಹಶೀಲ್ದಾರ್ ಕಚೇರಿಯಲ್ಲಿ ಹಾಜರಿರುವಂತ ತಹಶೀಲ್ದಾರ್ ಡಾ.ಪ್ರತಿಭಾ.ಆರ್ ಅವರು, ಸಮಸ್ಯೆ ಹೇಳಿಕೊಂಡು ಬರುವಂತ ಜನರನ್ನು ಕಚೇರಿಯಲ್ಲಿ ಕೂರಿಸಿ ಮಾತನಾಡುವ ಪರಿ ಬಂದವರನ್ನೇ ಬೆರಗುಗೊಳಿಸುತ್ತದೆ. ತಾನೊಂದು ಅರ್ಜಿ ಕೊಟ್ಟಿದ್ದೆ, ನನ್ನ ಈ ಕೆಲಸ ಆಗಬೇಕಿತ್ತು. ಇನ್ನೂ ಆಗಿಲ್ಲ ಅಂದ್ರೆ ಸಾಕು, ಫೈಲ್ ಎಲ್ಲಿದೆ ಅಂತ ಕೇಳಿ, ಆ ವಿಭಾಗದ ಅಧಿಕಾರಿ, ಸಿಬ್ಬಂದಿ ಖುದ್ದು ಫೈಲ್ ಸಹಿತ ಕರೆಸುತ್ತಾರೆ. ಕಡತ ಪರಿಶೀಲಿಸಿದ ಬಳಿಕ, ಸಮಸ್ಯೆ ಏನೆಂದು ಬಿಡಿಸಿ ಹೇಳಿ, ದಾಖಲೆ ಬೇಕಿದ್ದರೇ ತಿಳಿಸಿ, ಸ್ಥಳದಲ್ಲೇ ಮಾಹಿತಿ ಒದಗಿಸೋ ಕೆಲಸ ಮಾಡುವ ಪರಿ ಬಂದಿದ್ದವರನ್ನೇ ಬೆರಗುಗೊಳಿಸುತ್ತದೆ.
ಒಂದು ವೇಳೆ ಸಾರ್ವಜನಿಕರು ತಮ್ಮನ್ನು ಕಂಡು ವಿಚಾರಿಸಿದಂತ ಮಾಹಿತಿ, ದಾಖಲೆ ದೊರೆಯದೇ ಇದ್ದಲ್ಲಿ, ಅವರ ಮೊಬೈಲ್ ಸಂಖ್ಯೆಯನ್ನು ಪಡೆದು, ಕಚೇರಿಯ ಸಿಬ್ಬಂದಿಗಳನ್ನು ಕರೆದು ಹುಡುಕಿಸಿ, ಪಡೆದು ಕರೆ ಮಾಡಿ ಒದಗಿಸುವಂತ ಕೆಲಸವನ್ನು ತಹಶೀಲ್ದಾರ್ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ತಹಶೀಲ್ದಾರ್ ಎನ್ನುವ ಕಿಂಚಿತ್ತೂ ಗರ್ವ, ಅಹಂ ಇಲ್ಲದಂತ ಡಾ.ಪ್ರತಿಭಾ.ಆರ್ ಅವರ ಸಹೃದಯ ನಡೆಯನ್ನು ಕಂಡ ಸಾಗರ ತಾಲ್ಲೂಕಿನ ಜನತೆ ಅವರ ಕಚೇರಿಯ ಮುಂದೆ ಬೆಳಗಾದರೇ ಸಾಕು ಸಾಲುಗಟ್ಟಿ ನಿಲ್ಲುವುದನ್ನು ಕಾಣಬಹುದಾಗಿದೆ. ಹೀಗೆ ಕಚೇರಿಗೆ ಬಂದ ಸಾರ್ವಜನಿಕರ ಅಹವಾಲನ್ನು ಅಷ್ಟೇ ಸೌಜನ್ಯದಿಂದ ಕೇಳುವಂತ ಡಾ.ಪ್ರತಿಭಾ.ಆರ್ ಅವರು, ಅದನ್ನು ಪರಿಹರಿಸುವಂತ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಜನತೆಯ ಮಾತಾಗಿದೆ.
ಕಚೇರಿಯ ಕೆಲಸದ ಹೊರತಾಗಿಯೂ ತಾವು ಸಾಗುವ ದಾರಿಯಲ್ಲಿ ಅಪಘಾತವಾದಾಗಲೂ ದೇವರೆನ್ನುವಂತೆ ದುತ್ತನೇ ಘಟನಾ ಸ್ಥಳಕ್ಕೆ ತೆರಳುವಂತ ಅವರು, ಗಾಯಾಳುಗಳ ನೆರವಿಗೂ ಧಾವಿಸಿದ್ದು ಉಂಟು. ನಮ್ಮ ಊರಲ್ಲಿ ಈ ಸಮಸ್ಯೆ ಇದೆ, ಆ ಸಮಸ್ಯೆ ಇದೆ ಬಂದು ಬಗೆ ಹರಿಸಿ ಅಂದ್ರೂ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯವೈಖರಿ ಬೆರಗುಗೊಳಿಸುತ್ತದೆ.
ಒಟ್ಟಾರೆಯಾಗಿ ಸರ್ಕಾರಿ ಅಧಿಕಾರಿ ಅಂದ್ರೆ ಹೀಗಿರಬೇಕು. ತಹಶೀಲ್ದಾರ್ ಅಂದ್ರೆ ಹೀಗಿರಬೇಕು ಎನ್ನುವುದು ಸಾಗರ ತಾಲ್ಲೂಕಿನ ಜನತೆಯ ಮನೆ ಮನೆ ಮಾತು. ಇಂತಹ ಅಧಿಕಾರಿಯ ಸೇವೆ ಹೀಗೆಯೇ ಮುಂದುವರೆಯಲಿ, ಉತ್ತಮ ಸೇವೆಯನ್ನು ಜನರಿಗೆ ನೀಡಲಿ ಎಂಬುದಾಗಿ ಆಶಿಸೋಣ.
ವಿಶೇಷ ವರದಿ: ವಸಂತ ಬಿ ಈಶ್ವರಗೆರೆ, ಪ್ರಧಾನ ಸಂಪಾದಕರು..




