ದೀಪಾವಳಿ ಹಬ್ಬದ ವಿಶೇಷ: ಪರಮ್ ಫೌಂಡೇಶನ್‌ನಿಂದ ಲೇಸರ್ ಪ್ರೊಜೆಕ್ಷನ್ ಅನುಭವ | Param Foundation

Diwali Special Laser Projection Experience by Param Foundation

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ವಿಜ್ಞಾನ ಮತ್ತು ತಂತ್ರಜ್ಞಾನದೊಂದಿಗೆ ಬೆಸೆಯುವ ಉದ್ದೇಶದಿಂದ ಪರಮ್ ಫೌಂಡೇಶನ್ ವತಿಯಿಂದ( Param Foundation) ಜಯನಗರದ ಪಾರ್ಸೆಕ್ (Parsec) ಕೇಂದ್ರದಲ್ಲಿ ವಿಶೇಷ ಇಂಟರ್ಯಾಕ್ಟಿವ್ ಲೇಸರ್ ಪ್ರೊಜೆಕ್ಷನ್ ಅನುಭವ ಆಯೋಜಿಸಲಾಗಿತ್ತು. ಆ ಮೂಲಕ ಪರಮ್ ಫೌಂಡೇಶನ್( Param Foundation) ದೀಪಾವಳಿ ಹಬ್ಬದ ವಿಶೇಷತೆ ಸಾರ್ವಜನಿಕರ ಗಮನ ಸೆಳೆಯಿತು.

10ರಿಂದ 70 ವರ್ಷ ವಯಸ್ಸಿನವರೆಗೆ ವಿವಿಧ ವಯೋಮಾನದವರು ಈ ವಿಶೇಷ ಅನುಭವದಲ್ಲಿ ಭಾಗವಹಿಸಿ, ದೀಪಾವಳಿಯ ವಿಜ್ಞಾನ, ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ತಿಳಿದುಕೊಂಡರು.

ಲೇಸರ್ ಪ್ರೊಜೆಕ್ಷನ್ ಹಾಗೂ ವಿಶೇಷ ಆಪ್ ಮತ್ತು ಲೇಸರ್ ಕ್ಯೂಬ್‌ಗಳ ಮೂಲಕ ಪಟಾಕಿಗಳ ಹಿಂದಿರುವ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರವನ್ನು ಪರಿಚಯಿಸಲಾಯಿತು.

ಭಾಗವಹಿಸಿದವರು ಡಿಜಿಟಲ್ ಪಟಾಕಿಗಳನ್ನು ಬೆಳಗಿಸುವುದರ ಜೊತೆಗೆ ತಮ್ಮದೇ ಆದ ದೀಪಾವಳಿ ಶುಭಾಶಯಗಳನ್ನು ರಚಿಸುವ ಅವಕಾಶವನ್ನೂ ಪಡೆದರು.

ಈ ಸಂದರ್ಭದಲ್ಲಿ ಲೇಸರ್ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಮಾದರಿಗಳ ಕುರಿತು ಮಕ್ಕಳು ಸೇರಿದಂತೆ ಸಾರ್ವಜನಿಕರು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ, ವಿಜ್ಞಾನವನ್ನು ಹಬ್ಬದ ಸಂಭ್ರಮದೊಂದಿಗೆ ಅನುಭವಿಸಿದರು. ವಿಜ್ಞಾನ, ತಂತ್ರಜ್ಞಾನ ಮತ್ತು ಹಬ್ಬದ ಸಂಭ್ರಮವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸಿದ ಈ ವಿಶೇಷ ಕಾರ್ಯಕ್ರಮವು ಭಾಗವಹಿಸಿದವರಲ್ಲಿ ಹೊಸ ಕುತೂಹಲ ಮೂಡಿಸಿತು.