ರಾಜ್ಯದ 101 ತಾಲ್ಲೂಕುಗಳು ಬರಪೀಡಿತ: ಸರ್ಕಾರ ಘೋಷಣೆ

ಬೆಂಗಳೂರು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದ 101 ತಾಲೂಕುಗಳನ್ನು ಕರ್ನಾಟಕ ಸರ್ಕಾರ ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಿದೆ. ಕೇಂದ್ರ ಸರ್ಕಾರದ ‘ಬರ ನಿರ್ವಹಣಾ ಕೈಪಿಡಿ-2020’ರ ಮಾನದಂಡಗಳ ಆಧಾರದ ಮೇಲೆ ವೈಜ್ಞಾನಿಕ ಸಮೀಕ್ಷೆ ಹಾಗೂ ಸ್ಥಳ ಪರಿಶೀಲನೆ (ಗ್ರೌಂಡ್ ಟ್ರೂಥಿಂಗ್) ಮುಗಿಸಿದ ನಂತರ ಕಂದಾಯ ಇಲಾಖೆ ಈ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಪ್ರಕಾರ, ಒಟ್ಟು 101 ತಾಲೂಕುಗಳ ಪೈಕಿ 89 ತಾಲೂಕುಗಳು ‘ತೀವ್ರ ಬರ’ಕ್ಕೆ (Severe) ತುತ್ತಾಗಿದ್ದರೆ, ಉಳಿದ 12 ತಾಲೂಕುಗಳನ್ನು ‘ಮಧ್ಯಮ ಬರಪೀಡಿತ’ (Moderate) ಎಂದು ಗುರುತಿಸಲಾಗಿದೆ. ಈ ಘೋಷಣೆಯು ಇಂದಿನಿಂದಲೇ ಅನ್ವಯವಾಗಲಿದ್ದು, ಮುಂದಿನ ಆರು ತಿಂಗಳ ಅವಧಿಯವರೆಗೆ ಜಾರಿಯಲ್ಲಿರಲಿದೆ.

50 ವರ್ಷಗಳಲ್ಲೇ ಕನಿಷ್ಠ ಮಳೆ: ಕೃಷಿ ಕ್ಷೇತ್ರಕ್ಕೆ ಭಾರೀ ಪೆಟ್ಟು

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆ ತೀವ್ರ ಸಂಕಷ್ಟ ತಂದಿಟ್ಟಿದೆ. ಆಗಸ್ಟ್ 21ರ ವರೆಗಿನ ಲೆಕ್ಕಾಚಾರದಂತೆ ವಾಡಿಕೆಗಿಂತ ಶೇ. 31ರಷ್ಟು ಕಡಿಮೆ ಮಳೆಯಾಗಿದೆ. ಜೂನ್ ತಿಂಗಳಿನಲ್ಲಿ ಬರೋಬ್ಬರಿ ಶೇ. 42ರಷ್ಟು ಮಳೆ ಕೊರತೆಯಾಗಿದ್ದು, ಇದು ಕಳೆದ 50 ವರ್ಷಗಳ ಇತಿಹಾಸದಲ್ಲೇ (1976-2026) ಜೂನ್‌ನಲ್ಲಿ ಸುರಿದ ನಾಲ್ಕನೇ ಅತಿ ಕಡಿಮೆ ಮಳೆಯಾಗಿದೆ. ಜುಲೈನಲ್ಲಿಯೂ ಶೇ. 29ರಷ್ಟು ಕೊರತೆ ದಾಖಲಾಗಿದೆ. ಜೂನ್ 1ರಿಂದ ಆಗಸ್ಟ್ 12ರ ನಡುವಿನ 73 ದಿನಗಳಲ್ಲಿ ಸುಮಾರು 43 ದಿನಗಳು ಸಂಪೂರ್ಣ ಮಳೆಯಿಲ್ಲದೆ ಒಣಹವೆ ಮುಂದುವರಿದ ಕಾರಣ, ರೈತರ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿ ಬೆಳೆದ ಬೆಳೆಗಳು ಭೂಮಿಯಲ್ಲೇ ಒಣಗುತ್ತಿವೆ.

ಆ್ಯಪ್ ಮೂಲಕ ಸ್ಥಳ ಪರಿಶೀಲನೆ ಮತ್ತು ದೃಢೀಕರಣ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (KSNDMC) ಮಳೆ ಕೊರತೆ, ಮಣ್ಣಿನ ತೇವಾಂಶ ಮತ್ತು ಉಪಗ್ರಹ ಚಿತ್ರಣಗಳನ್ನು ಪರಿಶೀಲಿಸಿದ ಬಳಿಕ 25 ಜಿಲ್ಲೆಗಳ 102 ತಾಲೂಕುಗಳಲ್ಲಿ ‘ಕ್ರಾಪ್ ಲಾಸ್ ಜಿಟಿ’ ಮೊಬೈಲ್ ಆ್ಯಪ್ ಮೂಲಕ 1,539 ಹಳ್ಳಿಗಳಲ್ಲಿ ಪ್ರತ್ಯಕ್ಷ ಬೆಳೆ ಹಾನಿ ಸಮೀಕ್ಷೆ ನಡೆಸಲಾಯಿತು. ಈ ದತ್ತಾಂಶಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ 101 ತಾಲೂಕುಗಳು ಬರಪೀಡಿತ ಪಟ್ಟಿಗೆ ಅರ್ಹತೆ ಪಡೆದಿವೆ.

ಬರ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಗ್ರೀನ್ ಸಿಗ್ನಲ್

ಬರ ಘೋಷಣೆಯಾಗಿರುವ ಎಲ್ಲ ತಾಲೂಕುಗಳಲ್ಲಿ ಎಸ್‌ಡಿಆರ್‌ಎಫ್ (SDRF) ನಿಯಮಾವಳಿಗಳ ಪ್ರಕಾರ ತಕ್ಷಣವೇ ಪರಿಹಾರ ಮತ್ತು ತುರ್ತು ಕಾರ್ಯಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಪೂರ್ಣ ಅಧಿಕಾರ ನೀಡಿದೆ. ಜೊತೆಗೆ ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಅಧಿಕಾರಿಗಳು ಜಂಟಿಯಾಗಿ ಬೆಳೆ ನಷ್ಟದ ಅಂತಿಮ ಸಮೀಕ್ಷೆ ನಡೆಸಿ ಶೀಘ್ರ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ. ಹವಾಮಾನ ಪರಿಸ್ಥಿತಿಯನ್ನು ಪ್ರತಿ ವಾರ ಪರಾಮರ್ಶಿಸಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಅರ್ಹತೆ ಪಡೆಯುವ ಇತರ ತಾಲೂಕುಗಳನ್ನೂ ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.

ಬರಪೀಡಿತ ತಾಲೂಕುಗಳ ಜಿಲ್ಲಾವಾರು ವಿವರ:

ತೀವ್ರ ಬರಪೀಡಿತ ತಾಲೂಕುಗಳು (89):

  • ಬೆಂಗಳೂರು ನಗರ: ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಯಲಹಂಕ

  • ಬೆಂಗಳೂರು ಗ್ರಾಮಾಂತರ: ಹೊಸಕೋಟೆ, ನೆಲಮಂಗಲ

  • ಬೆಂಗಳೂರು ದಕ್ಷಿಣ: ಮಾಗಡಿ, ರಾಮನಗರ

  • ಕೋಲಾರ: ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್

  • ಚಿಕ್ಕಬಳ್ಳಾಪುರ: ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ

  • ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಸಿರಾ, ತುಮಕೂರು, ತುರುವೇಕೆರೆ

  • ಚಿತ್ರದುರ್ಗ: ಚಳ್ಳಕೆರೆ, ಹಿರಿಯೂರು, ಹೊಸದುರ್ಗ

  • ದಾವಣಗೆರೆ: ಚನ್ನಗಿರಿ, ಹೊನ್ನಾಳಿ, ನ್ಯಾಮತಿ

  • ಚಾಮರಾಜನಗರ: ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು

  • ಮೈಸೂರು: ಹೆಗ್ಗಡದೇವನಕೋಟೆ, ಹುಣಸೂರು, ಕೃಷ್ಣರಾಜನಗರ, ಮೈಸೂರು, ನಂಜನಗೂಡು, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ

  • ಮಂಡ್ಯ: ಕೃಷ್ಣರಾಜಪೇಟೆ, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ

  • ಬಳ್ಳಾರಿ: ಬಳ್ಳಾರಿ, ಸಂಡೂರು, ಕುರುಗೋಡು, ಕಂಪ್ಲಿ

  • ಕೊಪ್ಪಳ: ಗಂಗಾವತಿ, ಕುಕನೂರು, ಕನಕಗಿರಿ

  • ರಾಯಚೂರು: ದೇವದುರ್ಗ, ಮಸ್ಕಿ, ಅರಕೇರಾ

  • ಬೀದರ್: ಬೀದರ್, ಬಸವಕಲ್ಯಾಣ, ಹುಮ್ನಾಬಾದ್, ಚಿಟಗುಪ್ಪಾ

  • ಬಾಗಲಕೋಟೆ: ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ, ಇಳಕಲ್

  • ವಿಜಯಪುರ: ವಿಜಯಪುರ, ನಿಡಗುಂದಿ, ಕೊಲ್ಹಾರ

  • ಗದಗ: ಗಜೇಂದ್ರಗಡ

  • ಹಾಸನ: ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ

  • ಚಿಕ್ಕಮಗಳೂರು: ಅಜ್ಜಂಪುರ

  • ಯಾದಗಿರಿ: ಶಹಾಪುರ

  • ವಿಜಯನಗರ: ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ

ಮಧ್ಯಮ ಬರಪೀಡಿತ ತಾಲೂಕುಗಳು (12):

ದೇವನಹಳ್ಳಿ, ದಾವಣಗೆರೆ, ಮದ್ದೂರು, ಪಾಂಡವಪುರ, ಲಿಂಗಸೂಗೂರು, ರಾಯಚೂರು, ಕೊಪ್ಪ, ನರಸಿಂಹರಾಜಪುರ, ತರೀಕೆರೆ, ಸೋಮವಾರಪೇಟೆ, ಮುಂಡಗೋಡ ಹಾಗೂ ಯಲ್ಲಾಪುರ