ಹೀಗಿವೆ ಇಂದಿನ ಕರ್ನಾಟಕ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ | Karnataka Cabinet Meeting

Here are the key highlights from today's Karnataka Cabinet meeting

ಬೆಂಗಳೂರು: ಇಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(CM DK Shivakumar) ನೇತೃತ್ವದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ(Karnataka Cabinet Meeting) ರೈತರು, ಬಡವರು, ಶ್ರಮಿಕರು ಹಾಗೂ ರಾಜ್ಯದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ಮತ್ತು ಜನಪರ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆ ಕರ್ನಾಟಕ ಸಂಪುಟ ಸಭೆಯ(Karnataka Cabinet Meeting) ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.

ಪ್ರಮುಖವಾಗಿ ಒಂದು ಲಕ್ಷ ಹೊಸ ಮನೆಗಳ ನಿರ್ಮಾಣ, ಸಮುದಾಯದ ಶ್ರಮಿಕರಿಗೆ ಶೇ. 50ರ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ, ಹಿಂದುಳಿದ ವರ್ಗಗಳ ನಿಗಮಗಳ ಸಾಲದ ಬಡ್ಡಿ ಮನ್ನಾ, 2,000 ಎಲೆಕ್ಟ್ರಿಕ್ ಬಸ್‌ಗಳ ಸೇರ್ಪಡೆ ಹಾಗೂ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಸದಸ್ಯೆಯ ಅಮಾನತಿಗೆ ಶಿಫಾರಸು ಮಾಡಲು ಸಂಪುಟ ತೀರ್ಮಾನಿಸಿದೆ.

ಬಡವರಿಗೆ 1 ಲಕ್ಷ ಮನೆ ಹಾಗೂ ಶ್ರಮಿಕರಿಗೆ ಶೇ. 50ರ ರಿಯಾಯಿತಿಯಲ್ಲಿ ನಿವೇಶನ ಭಾಗ್ಯ

ರಾಜ್ಯದ ವಿವಿಧ ವಸತಿ ಯೋಜನೆಗಳಡಿ ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ₹2,241 ಕೋಟಿ ವೆಚ್ಚದಲ್ಲಿ ಫಲಾನುಭವಿ ಆಧಾರಿತವಾಗಿ ಒಂದು ಲಕ್ಷ ಹೊಸ ಮನೆಗಳನ್ನು ನಿರ್ಮಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಡಿ ಸಾಮಾನ್ಯ ವರ್ಗದ ಫಲಾನುಭವಿಗಳ ಸಹಾಯಧನವನ್ನು ₹1.20 ಲಕ್ಷದಿಂದ ₹2 ಲಕ್ಷಕ್ಕೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಸಹಾಯಧನವನ್ನು ₹2 ಲಕ್ಷದಿಂದ ₹3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಮತ್ತೊಂದೆಡೆ, ಮುಖ್ಯಮಂತ್ರಿಗಳ ‘ನಮ್ಮ ಮನೆ’ ಯೋಜನೆಯಡಿ ರಾಜ್ಯದಾದ್ಯಂತ 6,600 ಎಕರೆ ಜಮೀನಿನಲ್ಲಿ ₹11,655 ಕೋಟಿ ವೆಚ್ಚದಲ್ಲಿ ಒಟ್ಟು 93,240 ನಿವೇಶನಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಈ ಪೈಕಿ ಸಮುದಾಯದ ಶ್ರಮಿಕರು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ (EWS) ಶೇ. 50ರ ರಿಯಾಯಿತಿ ದರದಲ್ಲಿ ₹2,914 ಕೋಟಿ ವೆಚ್ಚದಲ್ಲಿ 50 ಸಾವಿರ ನಿವೇಶನಗಳನ್ನು (30×40 ಅಳತೆ) ಹಂಚಿಕೆ ಮಾಡಲಾಗುವುದು.

ಹಿಂದುಳಿದ ವರ್ಗಗಳ ₹236 ಕೋಟಿ ಬಡ್ಡಿ ಮನ್ನಾ ಮತ್ತು ಕೃಷಿ ವಿಸ್ತಾರ ಯೋಜನೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 7 ನಿಗಮಗಳಲ್ಲಿ 2012-14ರಿಂದ 2020-21ರವರೆಗೆ ವಿವಿಧ ಯೋಜನೆಗಳಡಿ ಸಾಲ ಪಡೆದವರು ಅಸಲನ್ನು ಪೂರ್ಣವಾಗಿ ಮರುಪಾವತಿಸಿದರೆ, ಒಟ್ಟು ₹236.04 ಕೋಟಿ ಬಡ್ಡಿಯನ್ನು ಮನ್ನಾ ಮಾಡುವ ‘ಒಂದಾವರ್ತಿ ತೀರುವಳಿ’ (One Time Settlement) ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ 2.83 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು, ಆರು ತಿಂಗಳ ಒಳಗಾಗಿ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕಿದೆ. ಇನ್ನು ರೈತರ ಆದಾಯ ಹೆಚ್ಚಿಸಲು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಮುಂದಿನ ಮೂರು ವರ್ಷಗಳಲ್ಲಿ ₹75 ಕೋಟಿ ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಅಗ್ರಿ-ಟೂರಿಸಂ ಹಾಗೂ ಕೃಷಿ ತ್ಯಾಜ್ಯಗಳ ಸದ್ಬಳಕೆಗೆ ಉತ್ತೇಜನ ನೀಡುವ ಈ ಯೋಜನೆಯಿಂದ 10 ಸಾವಿರ ರೈತ ಕುಟುಂಬಗಳಿಗೆ ನೆರವಾಗಲಿದೆ.

ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅಮಾನತಿಗೆ ಶಿಫಾರಸು

ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಆರೋಪಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯರಾದ ಶ್ರೀಮತಿ ಬಿ.ವಿ. ಗೀತಾ ಅವರನ್ನು ಅಮಾನತುಗೊಳಿಸಲು ಹಾಗೂ ಮುಂದಿನ ವಿಚಾರಣೆ ನಡೆಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.

2,000 ಎಲೆಕ್ಟ್ರಿಕ್ ಬಸ್ ಖರೀದಿ, ಹೆದ್ದಾರಿ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ

ಪರಿಸರ ಸ್ನೇಹಿ ಸುಸ್ಥಿರ ಸಾರಿಗೆ ವ್ಯವಸ್ಥೆ ರೂಪಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ (₹1,400 ಕೋಟಿ ವಿಶ್ವಬ್ಯಾಂಕ್ ಹಾಗೂ ₹300 ಕೋಟಿ ರಾಜ್ಯ ಸರ್ಕಾರ) ಒಟ್ಟು ₹1,700 ಕೋಟಿ ವೆಚ್ಚದಲ್ಲಿ 2,000 ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಾಚರಣೆಗೆ ತರಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಲ್ಲಿ KSRTCಗೆ 1,000, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಸಾರಿಗೆ ಸಂಸ್ಥೆಗೆ 500 ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ 500 ಬಸ್‌ಗಳನ್ನು ಒದಗಿಸಲಾಗುವುದು. ಅಲ್ಲದೆ, ಕೆಶಿಪ್-4 (KSHIP-IV) ಯೋಜನೆಯಡಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನೆರವಿನೊಂದಿಗೆ ₹10,252.58 ಕೋಟಿ ವೆಚ್ಚದಲ್ಲಿ 12 ಜಿಲ್ಲೆಗಳ ವ್ಯಾಪ್ತಿಯ 9 ರಸ್ತೆಗಳ ಒಟ್ಟು 730.01 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಹಾಸನ ವಿಮಾನ ನಿಲ್ದಾಣ ಅಭಿವೃದ್ಧಿಯ ಯೋಜನಾ ವೆಚ್ಚವನ್ನು ₹193.65 ಕೋಟಿಯಿಂದ ₹542.96 ಕೋಟಿಗೆ ಪರಿಷ್ಕರಿಸಿ, ಹೆಚ್ಚುವರಿ ₹349.31 ಕೋಟಿ ಅನುದಾನ ಮತ್ತು ಭೂಸ್ವಾಧೀನಕ್ಕೆ ಅನುಮೋದನೆ ಸಿಕ್ಕಿದೆ.

ಬೆಂಗಳೂರಿನ ಸ್ಟಾರ್ ಹೋಟೆಲ್ ತೆರಿಗೆ ವಿನಾಯಿತಿ ರದ್ದು; ರಸ್ತೆ ಅಭಿವೃದ್ಧಿಗೆ ಕೋಟ್ಯಂತರ ಅನುದಾನ

ಬೆಂಗಳೂರು ನಗರ ಪಾಲಿಕೆಗಳ ಆದಾಯ ಮೂಲವನ್ನು ಸಂರಕ್ಷಿಸುವ ಸಲುವಾಗಿ ಗ್ರೇಟರ್ ಬೆಂಗಳೂರು ಪ್ರದೇಶದ 5 ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಸ್ಟಾರ್ ಹೋಟೆಲ್‌ಗಳಿಗೆ 2021ರಲ್ಲಿ ನೀಡಲಾಗಿದ್ದ ಆಸ್ತಿ ತೆರಿಗೆ ವಿನಾಯಿತಿ ಆದೇಶವನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ. ಇದರಿಂದ 42 ಸ್ಟಾರ್ ಹೋಟೆಲ್‌ಗಳಿಂದ ಪಾಲಿಕೆಗಳಿಗೆ ಈಗಾಗಲೇ ಪಾವತಿಯಾಗಿರುವ ಸುಮಾರು ₹285 ಕೋಟಿ ಮೊತ್ತ ಉಳಿತಾಯವಾಗಲಿದೆ. ಇನ್ನು ಬೆಂಗಳೂರಿನಲ್ಲಿ 130.85 ಕಿ.ಮೀ. ಉದ್ದದ 88 ರಸ್ತೆಗಳ ಹೊಸ ವೈಟ್ ಟಾಪಿಂಗ್ ಕಾಮಗಾರಿಗೆ ₹2,321.17 ಕೋಟಿ, ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದವರೆಗಿನ ಹೊರವರ್ತುಲ ರಸ್ತೆ ಅಭಿವೃದ್ಧಿಗೆ ₹486.79 ಕೋಟಿ ಹಾಗೂ ತ್ಯಾಜ್ಯ ನಿರ್ವಹಣೆಯ 10 ಪ್ಯಾಕೇಜ್‌ಗಳಿಗೆ ₹1,379.62 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಯಶವಂತಪುರ-ಹಳೆ ಮದ್ರಾಸ್ ರಸ್ತೆ ಮತ್ತು ಮಾರೇನಹಳ್ಳಿ-ಕನಕಪುರ ಮುಖ್ಯರಸ್ತೆಯ ಎರಡು ಎಲೆವೇಟೆಡ್ ಕಾರಿಡಾರ್‌ಗಳ ನಿಧಿ ರಚನೆ ಆದೇಶವನ್ನು ಮಾರ್ಪಡಿಸಲಾಗಿದ್ದು, ಕೆಂಗೇರಿ ವಾಣಿಜ್ಯ ಸಂಕೀರ್ಣದ 2ನೇ ಹಂತದ ಕಾಮಗಾರಿಗೆ ₹68.50 ಕೋಟಿ ಮಂಜೂರಾಗಿದೆ.

ಆರೋಗ್ಯ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮತ್ತು ಅಂಗನವಾಡಿ ಸಿಬ್ಬಂದಿಗೆ ಸಮವಸ್ತ್ರ

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ವಾರ್ಡ್ 71ರ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಆರಂಭಿಸಲು ಹಾಗೂ ಹುಬ್ಬಳ್ಳಿಯ ಜಯದೇವ ಕೇಂದ್ರಕ್ಕೆ ₹36.597 ಕೋಟಿ ವೆಚ್ಚದಲ್ಲಿ 2 ಕ್ಯಾಥ್‌ಲ್ಯಾಬ್ ಮತ್ತು 1 ಆಪರೇಷನ್ ಥಿಯೇಟರ್ ಉಪಕರಣಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ. ಸುಟ್ಟಗಾಯಗಳಿಂದ ಬದುಕುಳಿದವರ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಪುನರ್ವಸತಿ ನೀತಿ-2025 ಜಾರಿಗೊಳಿಸಿ, ₹105.45 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ 15 ಹಾಸಿಗೆಗಳ ವಾರ್ಡ್ ಹಾಗೂ ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ, 1ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಭಾಗದಲ್ಲಿ ಹಾಗೂ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ, ಬಿಪಿಎಲ್ ಕಾರ್ಡ್ ಹೊಂದಿರುವ 5,000 ಅಲ್ಪಸಂಖ್ಯಾತ ಬಿಇ ಮತ್ತು ಬಿಸಿಎ (BE/BCA) ವಿದ್ಯಾರ್ಥಿಗಳಿಗೆ ₹25 ಕೋಟಿ ವೆಚ್ಚದಲ್ಲಿ ಉಚಿತ ಲ್ಯಾಪ್‌ಟಾಪ್ ವಿತರಿಸಲು ಒಪ್ಪಿಗೆ ಸಿಕ್ಕಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಹೆಚ್ಚುವರಿಯಾಗಿ ಒಂದು ಜೊತೆ ಸಮವಸ್ತ್ರ (ಒಟ್ಟು 5,59,384 ಸಮವಸ್ತ್ರ) ಖರೀದಿಸಲು ₹27.97 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.

ಇತರೆ ಪ್ರಮುಖ ಸಂಪುಟ ನಿರ್ಧಾರಗಳು

ಪೊಲೀಸ್ ಪಡೆಗಳ ಆಧುನೀಕರಣ ಯೋಜನೆಯಡಿ ₹11 ಕೋಟಿ ವೆಚ್ಚದಲ್ಲಿ ತುರ್ತು ಸ್ಪಂದನೆಗಾಗಿ 134 ಮಾರುತಿ ಎರ್ಟಿಗಾ ವಾಹನಗಳ ಖರೀದಿ ಹಾಗೂ ಅಗ್ನಿಶಾಮಕ ದಳಕ್ಕೆ ₹16 ಕೋಟಿ ವೆಚ್ಚದಲ್ಲಿ 52-54 ಮೀಟರ್ ಎತ್ತರಕ್ಕೆ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್‌ಫಾರಂ ವಾಹನ ಖರೀದಿಸಲು ಅನುಮೋದನೆ ನೀಡಲಾಗಿದೆ. ತಿಪಟೂರು ನಗರಕ್ಕೆ ನೊಣವಿನಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡುವ ಹೆಚ್ಚುವರಿ ಯೋಜನೆಗೆ ₹39.35 ಕೋಟಿ, ಅಫಜಲಪುರ ಪ್ರಜಾಸೌಧ ಕಟ್ಟಡದ ಎರಡನೇ ಹಂತದ ಕಾಮಗಾರಿಗೆ ₹5 ಕೋಟಿ ಮಂಜೂರಾಗಿದೆ. ಅಲ್ಲದೆ, 2027ನೇ ಸಾಲಿನ 18 ಸಾರ್ವತ್ರಿಕ ಮತ್ತು 19 ಪರಿಮಿತ ರಜಾದಿನಗಳ ಪಟ್ಟಿಗೆ ಅಂಗೀಕಾರ, ಭಾರತ್ ಜೋಡೋ ಯುವಸಂಘ ಯೋಜನೆ ಅನುಷ್ಠಾನಕ್ಕೆ ರಾಜ್ಯಮಟ್ಟದ ಯುವ ಸಮಿತಿ ರಚನೆ, ಬಿಎನ್‌ಎಸ್‌ಎಸ್ (BNSS) ಕಲಂ 497(2)ರಡಿ ಆಸ್ತಿ ವಿಲೇವಾರಿ ನಿಯಮಗಳ ರಚನೆ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಪಂಚಾಯತ್ ರಾಜ್ ಮತ್ತು ನಗರ ಯೋಜನಾ ಕಾಯ್ದೆ ತಿದ್ದುಪಡಿ ವಿಧೇಯಕಗಳನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಸಮ್ಮತಿಸಿದೆ