ಸುಚಿವ್ರತ್ ಗೆ ಉಚಿತ ಸೀಟ್ ಘೋಷಿಸಿದ ಸಚಿವ ಈಶ್ವರ ಖಂಡ್ರೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಅಭಿನಂದನೆ

ಬೆಂಗಳೂರು : ಜನಿವಾರ ತೆಗೆಯದ ಕಾರಣಕ್ಕೆ ಕೆಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಗೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯ (ಬಿಕೆಐಟಿ)ದಲ್ಲಿ ಉಚಿತ ಪ್ರವೇಶ ನೀಡುವುದಾಗಿ ಘೋಷಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಅವರ ಔದಾರ್ಯಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಭಿನಂದನೆ ಸಲ್ಲಿಸಿದೆ.

ಇಂದು ಬೆಳಗ್ಗೆ ಬೀದರ್ ನ ಸುಚಿವ್ರತ್ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದ ಹಾಗೂ ಇನ್ನು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಸಚಿವರಿಗೆ ಎ.ಕೆ.ಬಿ.ಎಂ.ಎಸ್. ಮಹಾಸಭಾಧ್ಯಕ್ಷರಾದ ಎಸ್.ರಘುನಾಥ್ ಹೃದಯಾಂತರಾಳದ ಅಭಿನಂದನೆ ಸಲ್ಲಿಸಿದ್ದಾರೆ.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬರೆದ ಪತ್ರದಲ್ಲಿ ಏನಿದೆ.?

ಬೀದರ್‌ನಲ್ಲಿ ಕೆಸಿಇಟಿ ಪರೀಕ್ಷೆ ವಂಚಿತ ಬ್ರಾಹ್ಮಣ ವಿದ್ಯಾರ್ಥಿ ಸುಚಿದ್ರತ್ ಮನೆಗೆ ಭೇಟಿ ನೀಡಿ ಆತ್ಮಸ್ಥೆರ್ಯ ತುಂಬಿ, ಬಿಕೆಐಟಿಯಲ್ಲಿ ಉಚಿತ ಸೀಟ್ ನೀಡುವ ಭರವಸೆ ನೀಡಿರುವ ತಮಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಲು ಇಚ್ಚಿಸುತ್ತೇನೆ.

ಬೀದರ್ ನಗರದ ಸಾಯಿ ಸ್ಫೂರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಸುಚಿವ್ರತ್ ಕುಲಕರ್ಣಿ ಎಂಬ ಬ್ರಾಹ್ಮಣ ವಿದ್ಯಾರ್ಥಿಗೆ ಪರೀಕ್ಷಾ ಕೊಠಡಿ ಪ್ರವೇಶಕ್ಕೆ ಜನಿವಾರ ತೆಗೆಯಲು ಒತ್ತಾಯಿಸಿ, ಆತ ಒಪ್ಪದಿದ್ದಾಗ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಾಪಸ್ ಕಳಿಸುವ ಮೂಲಕ, ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯದ ಜೊತೆ ಚಲ್ಲಾಟವಾಡಿದ ಹಾಗೂ ಬ್ರಾಹ್ಮಣರ ನಂಬಿಕೆಗೆ ಚ್ಯುತಿ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತತ್‌ಕ್ಷಣವೇ ಸ್ಪಂದಿಸಿ, ಸ್ವತಃ ವಿದ್ಯಾರ್ಥಿಯ ಮನೆಗೆ ತೆರಳಿ, ಭಾಲ್ಕಿಯಲ್ಲಿರುವ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ ಚಿ. ಸುಚಿವ್ರತ್‌ಗೆ ಉಚಿತ ಪ್ರವೇಶ ನೀಡುವ ಘೋಷಣೆ ಮಾಡಿರುವ ತಮ್ಮ ಔದಾರ್ಯಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಾವು ನೀಡಿದ ಆದೇಶದ ಕುರಿತು ನಾವು ಆಭಾರಿಯಾಗಿದ್ದೇವೆ.

ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿರುವ ತಮ್ಮನ್ನು ಮಹಾಸಭಾ ತುಂಬು ಹೃದಯದಿಂದ ಅಭಿನಂದಿಸುತ್ತದೆ.
ಗೌರವಪೂರ್ವಕ ವಂದನೆಗಳು ಅಂತ ಹೇಳಿದೆ.