ನವದೆಹಲಿ: ಕಳೆದ ಅಕ್ಟೋಬರ್ 12 ರಂದು ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ಮೂರು ತಿಂಗಳ ಗರ್ಭಿಣಿ ಮಹಿಳಾ ಪತ್ರಕರ್ತೆಯ ಮೇಲೆ ದೌರ್ಜನ್ಯ ಎಸಗಲಾಗಿದೆ ಹಾಗೂ ಅವರನ್ನು ತಳ್ಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಸೇರಿದಂತೆ ಇತರ ನಾಯಕರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ಅರ್ಜಿದಾರರು ಈ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ತಕ್ಷಣವೇ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲು ಹಾಗೂ ಸಂತ್ರಸ್ತ ಮಹಿಳಾ ಪತ್ರಕರ್ತೆಗೆ ಸೂಕ್ತ ಪರಿಹಾರ ಒದಗಿಸಲು ಆದೇಶಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಕುರಿತು ತಮ್ಮ ಪ್ರತಿಕ್ರಿಯೆ ನೀಡುವಂತೆ ರಾಹುಲ್ ಗಾಂಧಿ(Rahul Gandhi) ಹಾಗೂ ಸಂಬಂಧಪಟ್ಟ ಇತರರಿಗೆ ನೋಟಿಸ್ ನೀಡಿದೆ.
ಸುಪ್ರೀಂ ಆವರಣದಲ್ಲೇ ಅಮಾನವೀಯ ವರ್ತನೆ:
ಸಂತ್ರಸ್ತ ಪತ್ರಕರ್ತೆ ರಿಚಾ ಪರಾಶರ್ ಅವರ ಪರವಾಗಿ ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಗೌರವ್ ಭಾಟಿಯಾ, “ಸುಪ್ರೀಂ ಕೋರ್ಟ್ನ ನೋಂದಣಿ ಕಚೇರಿಯ (ರೆಜಿಸ್ಟ್ರಿ) ಆವರಣದಲ್ಲೇ ಮಹಿಳಾ ಪತ್ರಕರ್ತೆಯೊಂದಿಗೆ ಅನುಚಿತವಾಗಿ ನಡೆದುಕೊಳ್ಳಲಾಗಿದೆ. ಕವರೇಜ್ ಮಾಡಲು ಯತ್ನಿಸುತ್ತಿದ್ದ ಪತ್ರಕರ್ತೆಯನ್ನು ರಾಹುಲ್ ಗಾಂಧಿ ಹಾಗೂ ಅವರ ಭದ್ರತಾ ಸಿಬ್ಬಂದಿ ಎಳೆದಾಡಿ, ನೂಕಿದ್ದಾರೆ. ತೀವ್ರ ಘಾಸಿಗೊಂಡ ಪತ್ರಕರ್ತೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಯಿತು” ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಉದ್ದೇಶಪೂರ್ವಕ ದಾಳಿಯ ಆರೋಪ:
ಸಲ್ಲಿಕೆಯಾಗಿರುವ ಅರ್ಜಿಯ ಪ್ರಕಾರ, ಪ್ರತಿಭಟನೆಯ ಸಂದರ್ಭದಲ್ಲಿ ಗರ್ಭಿಣಿ ಪತ್ರಕರ್ತೆಯನ್ನು ಪ್ರವೇಶ ದ್ವಾರದ (ಗೇಟ್) ಕಡೆಗೆ ತೀವ್ರ ಬಲದಿಂದ ತಳ್ಳಲಾಗಿತ್ತು. ಈ ತಳ್ಳಾಟದಿಂದಾಗಿ ಅವರು ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದರು. ಭದ್ರತಾ ಸಿಬ್ಬಂದಿ, ಪತ್ರಕರ್ತರು ಮತ್ತು ಇತರ ಜನರು ಉಪಸ್ಥಿತರಿದ್ದ ಸಂದರ್ಭದಲ್ಲಿ ಇದು ನೂಕಾಟ-ತಳ್ಳಾಟದ ನೆಪದಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ಎಸಗಲಾದ ದೌರ್ಜನ್ಯವಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ. ಆ ಸಂದರ್ಭದಲ್ಲಿ ತಮ್ಮನ್ನು ತಳ್ಳದಂತೆ ಪತ್ರಕರ್ತೆ ಗಟ್ಟಿಯಾಗಿ ವಿನಂತಿಸಿಕೊಂಡಿದ್ದರೂ ಸಹ ಅದನ್ನು ಲೆಕ್ಕಿಸದೆ ನೂಕಲಾಗಿದೆ ಎಂದು ದೂರಲಾಗಿದೆ. ಈ ಘಟನೆಗೆ ಕಾರಣರಾದವರ ವಿರುದ್ಧ ನ್ಯಾಯಾಂಗ ನಿಂದನೆ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ವಿರೋಧ ಪಕ್ಷಗಳ ಮೆರವಣಿಗೆ ಹಿನ್ನೆಲೆ:
ಕೇಂದ್ರ ಚುನಾವಣಾ ಆಯೋಗದ ‘ವಿಶೇಷ ಸಮಗ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಹಾಗೂ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 12 ರಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಯಾದವ್ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಪ್ರಮುಖ ನಾಯಕರು ಸುಪ್ರೀಂ ಕೋರ್ಟ್ಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈ ವೇಳೆ ನಡೆದ ಗೊಂದಲದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ವಿವರಣೆ ಹಾಗೂ ಸಷ್ಟನೆಯನ್ನು ಕೇಳಿದ್ದು, ಮುಂದಿನ ವಿಚಾರಣೆ ವೇಳೆ ಹೆಚ್ಚಿನ ಅಂಶಗಳು ಹೊರಬರಲಿವೆ.


