ಮಾನವೀಯತೆ ಮೆರೆದು ಫೋನ್ ಕೊಟ್ಟಿದ್ದೇ ತಪ್ಪಾಯ್ತು; ಅಮಾಯಕನಿಗೆ 2.5 ವರ್ಷ ಜೈಲುವಾಸ! Act of Humanity

An act of humanity lending his phone proved to be a mistake an innocent man ends up with a 2.5-year prison sentence

ಮಂಡ್ಯ: ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು, ಮಾನವೀಯತೆ ಮೆರೆದು(Act of Humanity) ಅಮಾಯಕನೊಬ್ಬ ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿ ಜೈಲು ಶಿಕ್ಷೆ ಅನುಭವಿಸಿದ ಆಘಾತಕಾರಿ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ. ಸಿನಿಮಾದ ಥ್ರಿಲ್ಲರ್ ಕಥೆಯನ್ನೂ ಮೀರಿಸುವಂತಿರುವ ಈ ನೈಜ ಘಟನೆ, ಪೊಲೀಸರ ತನಿಖಾ ಲೋಪದಿಂದಾಗಿ ನಿರ್ದೋಷಿಯೊಬ್ಬನ ಬದುಕು ಹೇಗೆ ನರಕವಾಯಿತು ಎಂಬುದನ್ನು ಇಡೀ ರಾಜ್ಯದ ಮುಂದೆ ತೆರೆದಿಟ್ಟಿದೆ.

ಘಟನೆಯ ಹಿನ್ನೆಲೆ:

2019ರಲ್ಲಿ ಪಾಂಡವಪುರದ ಮಂಜು ಎಂಬ ಮಹಿಳೆ ದಿಢೀರ್ ನಾಪತ್ತೆಯಾಗಿದ್ದರು. ಈ ಸಂಬಂಧ ಆಕೆಯ ತಂದೆ ನಾಗರಾಜು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ, ಮಂಜು ನಾಪತ್ತೆಯಾಗುವ ಮುನ್ನ ಪಾಂಡವಪುರ ಬಸ್ ನಿಲ್ದಾಣದಿಂದ ಕೊನೆಯದಾಗಿ ಒಂದು ಫೋನ್ ಕರೆ ಮಾಡಿರುವುದು ತಿಳಿದುಬಂದಿತ್ತು. ಆ ಫೋನ್ ನಂಬರ್ ರಾಗಿಮುದ್ದನಹಳ್ಳಿಯ ನಿವಾಸಿ ರಾಜೇಶ್ ಎಂಬುವವರಿಗೆ ಸೇರಿತ್ತು.

ಒಂದು ಸಹಾಯ, ಎರಡೂವರೆ ವರ್ಷ ಜೈಲುವಾಸ:

ಅಂದು ಬಸ್ ನಿಲ್ದಾಣದಲ್ಲಿದ್ದ ರಾಜೇಶ್ ಬಳಿ ಅಪರಿಚಿತ ಮಹಿಳೆಯೊಬ್ಬಳು ತುರ್ತು ಕರೆ ಮಾಡಲು ಮೊಬೈಲ್ ಕೇಳಿದ್ದಳು. ಮಾನವೀಯತೆಯ ದೃಷ್ಟಿಯಿಂದ ರಾಜೇಶ್ ಫೋನ್ ನೀಡಿದ್ದರು. ಆದರೆ, ಇದೇ ಕೊನೆಯ ಕರೆಯನ್ನು ಪ್ರಮುಖ ಸಾಕ್ಷ್ಯವೆಂದು ಪರಿಗಣಿಸಿದ ಪೊಲೀಸರು, ಮಂಜುಳನ್ನು ರಾಜೇಶ್ ಅವರೇ ಕೊಲೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡರು.

ವಿಚಾರಣೆಯ ನೆಪದಲ್ಲಿ ತಮಗೆ ತೀವ್ರ ಚಿತ್ರಹಿಂಸೆ ನೀಡಿ, ಒತ್ತಡ ಹೇರಿ ಬಲವಂತವಾಗಿ ತಪ್ಪೊಪ್ಪಿಕೊಳ್ಳುವಂತೆ ಮಾಡಲಾಯಿತು ಎಂದು ರಾಜೇಶ್ ಆರೋಪಿಸಿದ್ದಾರೆ. ಪರಿಣಾಮವಾಗಿ, ಮಾಡದ ತಪ್ಪಿಗೆ 2021ರಿಂದ ಸುಮಾರು ಎರಡೂವರೆ ವರ್ಷಗಳ ಕಾಲ ರಾಜೇಶ್ ಜೈಲು ಶಿಕ್ಷೆ ಅನುಭವಿಸಬೇಕಾಯಿತು. 2024ರ ಜನವರಿಯಲ್ಲಿ ಜಾಮೀನಿನ ಮೇಲೆ ಹೊರಬಂದರೂ, ಸಮಾಜದ ಮುಂದೆ ‘ಕೊಲೆಗಾರ’ ಎಂಬ ಕಳಂಕದೊಂದಿಗೆ ಅವರು ದಿನದೂಡುತ್ತಿದ್ದರು.

7 ವರ್ಷಗಳ ಬಳಿಕ ಬಯಲಾದ ಸತ್ಯ:

ನಿರಂತರವಾಗಿ ಕಾನೂನು ಹೋರಾಟ ನಡೆಸಿದ ರಾಜೇಶ್ ಪರ ವಕೀಲ ನಟೇಶ್ ಅವರ ಸತತ ಪ್ರಯತ್ನದಿಂದಾಗಿ ಪ್ರಕರಣಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದೆ. 7 ವರ್ಷಗಳ ಹಿಂದೆ ಕೊಲೆಯಾಗಿದ್ದಾರೆ ಎನ್ನಲಾಗಿದ್ದ ಮಂಜು, ಇದೀಗ ನಾಗಮಂಗಲದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾರೆ.

ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿರುವ ಮಂಜು, “ನನಗೆ ಇಷ್ಟವಿಲ್ಲದ ಮದುವೆ ಮಾಡಿಸಿದ್ದರಿಂದ ಮನೆ ಬಿಟ್ಟು ಹೋಗಿದ್ದೆ. ಬಳಿಕ ಬೇರೊಬ್ಬರನ್ನು ವಿವಾಹವಾಗಿ ನೆಮ್ಮದಿಯಿಂದ ಸಂಸಾರ ನಡೆಸುತ್ತಿದ್ದೇನೆ. ರಾಜೇಶ್ ಯಾರೆಂಬುದೇ ನನಗೆ ತಿಳಿದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಜೇಶ್ ಅವರ ಅಮಾಯಕತ್ವ ಸಾಬೀತಾಗಿದೆ.

ಡಿವೈಎಸ್ಪಿ ತನಿಖೆಗೆ ಮಂಡ್ಯ ಎಸ್ಪಿ ಆದೇಶ:

ಪ್ರಕರಣದ ಅಸಲಿ ಸತ್ಯ ಹೊರಬರುತ್ತಿದ್ದಂತೆ ಅಂದಿನ ಪೊಲೀಸ್ ತನಿಖೆಯ ವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಂದು ತನಿಖೆ ನಡೆಸಿದ್ದ ಇನ್ಸ್‌ಪೆಕ್ಟರ್ ಪ್ರಭಾಕರ್ ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಂಡ್ಯ ಎಸ್ಪಿ ಡಾ. ವಿ.ಜೆ. ಶೋಭರಾಣಿ ಅವರು, ಈ ಇಡೀ ಪ್ರಕರಣದ ಕುರಿತು ಡಿವೈಎಸ್ಪಿ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಲು ಆದೇಶಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ.

ಸದ್ಯ ರಾಜೇಶ್ ಮೇಲಿದ್ದ ಕೊಲೆ ಕಳಂಕ ದೂರವಾಗಿದೆ. ಆದರೆ, ಯಾರೋ ಕಷ್ಟದಲ್ಲಿದ್ದಾರೆಂದು ಫೋನ್ ಕೊಟ್ಟಿದ್ದಕ್ಕೆ ಅಮಾಯಕನೊಬ್ಬ ಕಳೆದುಕೊಂಡ ಎರಡೂವರೆ ವರ್ಷಗಳ ಅಮೂಲ್ಯ ಸಮಯ, ಗೌರವ ಮತ್ತು ಅನುಭವಿಸಿದ ಮಾನಸಿಕ ಯಾತನೆಗೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.