ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದ ರಾಕೇಶ್ ಶೆಟ್ಟಿ ಬಂಧಿಸಿ: ಎರಡು ದಿನದ ಡೆಡ್ ಲೈನ್ ಕೊಟ್ಟ HDK | HD Kumaraswmay

Arrest Rakesh Shetty who conducted a sting operation against Siddaramaiah HDK sets a two-day deadline

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಿ ಅವರ ಚಾರಿತ್ರ್ಯಹರಣಕ್ಕೆ ಸಂಚು ಮಾಡಿದ ಪವರ್ ಟಿವಿಯ ರಾಕೇಶ್ ಶೆಟ್ಟಿ(Rakesh Shetty), ಆತನ ಸಹಚರ ಬಾಗೇಪಲ್ಲಿ ಪ್ರಶಾಂತ್ ಹಾಗೂ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರನ್ನು ಎರಡು ದಿನಗಳ ಒಳಗಾಗಿ ಬಂಧಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(HD Kumaraswamy-HDK) ಅವರು ಪೊಲೀಸರಿಗೆ ಎರಡು ದಿನಗಳ ಗಡುವು ನೀಡಿದರು.

ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಅನುಮಾನ ಬಂದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆಯುತ್ತೇವೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಹೇಳಿದ ಬೆನ್ನಲ್ಲೇ ಕೆಂಡಮಂಡಲರಾದ ಸಚಿವ ಕುಮಾರಸ್ವಾಮಿ ಅವರು, ನೇರವಾಗಿ ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ಧಾವಿಸಿ ಮೆಟ್ಟಿಲ ಮೇಲೆ ಧರಣಿ ಕೂತರು.

ಗೃಹ ಸಚಿವ ಪ್ರಿಯಾಂಕ ಖರ್ಗೆ ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡಿದ್ದಾರೆ. ನನ್ನ ಬಗ್ಗೆ ಮತ್ತು ನನ್ನ ಆರೋಗ್ಯದ ಬಗ್ಗೆ ಅತ್ಯಂತ ಲಘುವಾಗಿ ಮಾತನಾಡಿದ್ದಾರೆ. ನನ್ನ ಕಾರ್ಯಕರ್ತರು ಮಾತ್ರವಲ್ಲದೆ ವೈಯಕ್ತಿಕವಾಗಿ ನನಗೆ ಕೂಡ ತುಂಬಾ ನೋವಾಗಿದೆ. ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡಿದ ಕಿರಾತಕರನ್ನು ಬಂಧಿಸಲಾಗದ ಪೊಲೀಸ್ ಇಲಾಖೆ, ಜೆಡಿಎಸ್ ಕಾರ್ಯಕರ್ತರ ಮೇಲೆ ಬಿದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸ್ಟಿಂಗ್ ಮಾಡಿದ ವ್ಯಕ್ತಿಗಳನ್ನು ತಕ್ಷಣ ಬಂಧಿಸಬೇಕು. ಈ ಸರ್ಕಾರಕ್ಕೆ ಮತ್ತು ಪೊಲೀಸ್ ವ್ಯವಸ್ಥೆಗೆ ನಾನು ಎರಡು ದಿನಗಳ ಗಡುವು ನೀಡುತ್ತೇನೆ. ಈ ಅವಧಿ ಒಳಗೆ ತಪ್ಪಿತಸ್ಥರನ್ನು ಬಂಧಿಸದಿದ್ದರೆ ಮುಂದೆ ಆಗುವ ಪರಿಣಾಮಗಳಿಗೆ ನಾನು ಜವಾಬ್ದಾರಿ ಆಗುವುದಿಲ್ಲ. ಇದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕೇಂದ್ರ ಸಚಿವರು ಕಟು ಎಚ್ಚರಿಕೆ ನೀಡಿದರು.

ಸ್ಟಿಂಗ್ ಆಪರೇಷನ್ ಮಾಡಿದವರಿಗೂ ಹಾಗೂ ಹಾಲಿ ಮುಖ್ಯಮಂತ್ರಿಗೂ ಇರುವ ಸಂಬಂಧ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರ ರಾಜಕೀಯ ಬೆಳವಣಿಗೆಗಾಗಿ ಈ ರಾಕೇಶ್ ಶೆಟ್ಟಿ ಅಂಡ್ ಗ್ಯಾಂಗ್ ಸ್ಟಿಂಗ್ ಆಪರೇಷನ್ ಮಾಡಿತು? ಸಿದ್ದರಾಮಯ್ಯ ಅವರ ರಾಜಕೀಯವನ್ನು ಹೇಗೆ ಹಾಳು ಮಾಡಲಾಯಿತು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಸಚಿವರು ಆಗ್ರಹಪಡಿಸಿದರು.

ರಾಕೇಶ್ ಶೆಟ್ಟಿ ಮತ್ತು ಬಾಗೇಪಲ್ಲಿ ಪ್ರಶಾಂತ್:

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಲ್ಲಿ ನೇರವಾಗಿ ಭಾಗಿಯಾಗಿರುವ ಬಾಗೇಪಲ್ಲಿ ಪ್ರಶಾಂತ್ ಮತ್ತು ರಾಕೇಶ್ ಶೆಟ್ಟಿ ಒಟ್ಟಿಗೆ ಇರುವ ಹಾಗೂ ಬಾಗೇಪಲ್ಲಿ ಪ್ರಶಾಂತ್ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿ ವಾಲಾ ಅವರೊಂದಿಗೆ ಭಾವಚಿತ್ರ ತೆಗೆದುಕೊಂಡಿದ್ದು, ಅವೆರಡೂ ಚಿತ್ರಗಳನ್ನು ಸಚಿವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.

ರಾಕೇಶ್ ಶೆಟ್ಟಿ ಮೇಲೆ ನೂರಾರು ಪ್ರಕರಣಗಳು ದಾಖಲಾಗಿವೆ. ಸ್ಟಿಂಗ್ ಮಾಡಿ ಬ್ಲಾಕ್ ಮೇಲ್ ಮಾಡುವುದು, ಹಣ ವಸೂಲಿ, ಕೊಲೆ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಅನೇಕ ಪ್ರಕರಣಗಳಲ್ಲಿ ಎಫ್ ಐ ಆರ್ ಗಳು ದಾಖಲಾಗಿವೆ. ಆದರೂ ಕೂಡ ಅವನು ರಾಜಾರೋಷವಾಗಿ ಹೊರಗಡೆ ಓಡಾಡಿಕೊಂಡಿದ್ದಾನೆ. ಅವನಿಗೆ ಮುಖ್ಯಮಂತ್ರಿ ಡಿಕೆಶಿಯ ಪೂರ್ಣ ಬೆಂಬಲ ಇತ್ತು, ಅವನನ್ನು ಬಳಸಿಕೊಂಡು ಈ ಮುಖ್ಯಮಂತ್ರಿ ತನ್ನ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಆರೋಪಿಸಿದರು.

ಇತ್ತೀಚೆಗೆ ನಿವೃತ್ತಿಯಾದ ಹಿರಿಯ ಐಪಿಎಸ್ ಅಧಿಕಾರಿಗೆ ರಾಕೇಶ್ ಶೆಟ್ಟಿ ಕೊಲೆ ಬೆದರಿಕೆ ಹಾಕುತ್ತಾನೆ, ನೂರಾರು ಪೊಲೀಸರನ್ನು ಬೆದರಿಸಿ ಹಫ್ತಾ ವಸೂಲಿ ಮಾಡಿದ್ದಾನೆ. ಹಿರಿಯ ಅಧಿಕಾರಿಗಳನ್ನು ಬೆದರಿಸುವುದು, ಹನಿಟ್ರ್ಯಾಪ್ ಮಾಡುವುದು ಸೇರಿದಂತೆ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಹಾಗೆಯೇ ಇವನ ಸಹಚರ ಬಾಗೇಪಲ್ಲಿ ಪ್ರಶಾಂತ್ ಕೂಡ ರೌಡಿ ಶೀಟರ್ ಆಗಿದ್ದ, ಇವನ ವಿರುದ್ಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿತ್ತು. ಆಮೇಲೆ ಪೊಲೀಸರಿಗೆ ಹೆದರಿಸಿ ಅದನ್ನು ರದ್ದು ಮಾಡಿಸಿಕೊಂಡಿದ್ದಾನೆ. ಅಧಿಕಾರಿಗಳನ್ನು ಬೆದರಿಸುವುದು, ಹಣ ವಸೂಲಿ ಮಾಡುವುದು, ಬೆದರಿಸುವುದು, ಕೊಲೆ ಬೆದರಿಕೆ ಸೇರಿ ಅನೇಕ ಕುಖ್ಯಾತ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಇಂಥ ದುಷ್ಟರನ್ನು ಬಂಧಿಸದೆ ಇಷ್ಟು ದಿನ ಹೊರಗೆ ಓಡಾಡಲು ಅವಕಾಶ ಕೊಟ್ಟಿರುವ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಸಚಿವರು ಕಿಡಿಕಾರಿದರು.

ಇವರ ಆಟ ಬಹಳ ದಿನ ನಡೆಯುವುದಿಲ್ಲ. ಒಂದೂವರೆ ವರ್ಷ ಈ ಸರ್ಕಾರ ಇರುತ್ತೆ. ಆಮೇಲೆ ಇವರ ಆಟ ನಡೆಯುತ್ತದೆಯೇ ಎಂಬುದನ್ನು ನೋಡುತ್ತೇನೆ. ಪೊಲೀಸರು ಈ ಅಪರಾಧಿಗಳನ್ನು ಬಂಧಿಸಬೇಕು. ಇಲ್ಲವಾದರೆ ನಮ್ಮ ಶಕ್ತಿಯನ್ನು ತೋರಿಸುತ್ತೇನೆ ಎಂದು ಸಚಿವರು ಎಚ್ಚರಿಕೆ ನೀಡಿದರು.

ರಾಕೇಶ್ ಶೆಟ್ಟಿ ಮಾಧ್ಯಮದ ಮುಸುಕಿನಲ್ಲಿ ಅಕ್ರಮಗಳನ್ನು ಎಸಗುತ್ತಿದ್ದಾನೆ. ಆದರೆ ಕೆಲ ಪ್ರಭಾವಿಗಳ ಕುಮ್ಮಕ್ಕಿನಿಂದ ಅಕ್ರಮಗಳ ಮೇಲೆ ಅಕ್ರಮಗಳನ್ನು ಎಸಗುತ್ತಿದ್ದಾನೆ. ಅವನಿಗೆ ಕಡಿವಾಣ ಹಾಕದಿದ್ದರೆ ಮಾಧ್ಯಮ ಕ್ಷೇತ್ರಕ್ಕೆ ಕಳಂಕ ಬರುತ್ತದೆ, ಸಮಾಜ ಹಾಳಾಗುತ್ತದೆ ಎಂದು ಸಚಿವರು ಹೇಳಿದರು.

ಕೃಪಾ ಆಳ್ವಾ ಎಂಬ ಮಹಿಳೆ ಯಾರು?:

ರಾಕೇಶ್ ಶೆಟ್ಟಿ ಜತೆಯಲ್ಲಿ ಹೋಗಿ ಸ್ಟಿಂಗ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಕೃಪಾ ಆಳ್ವಾ ಎನ್ನುವ ಮಹಿಳೆ ಯಾರು? ಕಾಂಗ್ರೆಸ್ ಪಕ್ಷದಲ್ಲಿ ಇವರು ಏನಾಗಿದ್ದಾರೆ? ಇವರಿಗೂ ರಾಕೇಶ್ ಶೆಟ್ಟಿಗೂ ಸಂಬಂಧ ಏನು? ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಮಾಡುವುದಕ್ಕೆ ಈ ಮಹಿಳೆ ಏಕೆ ಹೋದರು? ಯಾರು ಕಳಿಸಿದರು? ಇವರ ಹಿತಾಸಕ್ತಿ ಏನಿದೆ? ಇಡೀ ಸ್ಟಿಂಗ್ ಆಪರೇಷನ್ ಹಿಂದೆ ಇರುವ ಸ್ಟಿಂಗ್ ಸಾಮ್ರಾಟ ಯಾರು? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪೊಲೀಸ್ ಆಯುಕ್ತರ ಕಚೇರಿಯ ಮೆಟ್ಟಿಲ ಮೇಲೆಯೇ ಜೆಡಿಎಸ್ ಪಕ್ಷದ ನಾಯಕರ ಜತೆ ಧರಣಿ ಕುಳಿತಿದ್ದ ಕೇಂದ್ರ ಸಚಿವರನ್ನು ಧರಣಿ ಕೈಬಿಡುವಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಮನವಿ ಮಾಡಿದರು.

ತಮ್ಮ ಆರೋಪದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸುತ್ತೇವೆ ಹಾಗೂ ಅನವಶ್ಯಕವಾಗಿ ನಿಮ್ಮ ಪಕ್ಷದ ಕಾರ್ಯಕರ್ತರಿಗೆ, ಸಾಮಾಜಿಕ ಜಾಲತಾಣದ ಯುವಕರಿಗೆ ಕಿರುಕುಳ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತರು ಭರವಸೆ ನೀಡಿದರು. ತದನಂತರ ಕೇಂದ್ರ ಸಚಿವರು ಧರಣಿಯನ್ನು ಕೈಬಿಟ್ಟರು.

ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ಟಿ.ಎನ್.ಜವರಾಯಿ ಗೌಡರು, ಶಾಸಕಿ ಕರೆಮ್ಮ ನಾಯಕ, ಮಾಜಿ ಶಾಸಕರಾದ ಸುರೇಶ್ ಗೌಡ, ವೀರಭದ್ರಪ್ಪ ಹಾಲರವಿ, ರಾಜಾ ವೆಂಕಟಪ್ಪ ನಾಯಕ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರು ಧರಣಿಯಲ್ಲಿ ಭಾಗಿಯಾಗಿದ್ದರು.