ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಚಂದ್ರು ಲಮಾಣಿ: 5 ಲಕ್ಷ ಕಮಿಷನ್ ಪಡೆಯುವಾಗಲೇ ಲಾಕ್

ಗದಗ: ಜಿಲ್ಲೆಯಲ್ಲಿ ಗುತ್ತಿಗೆದಾರನೊಬ್ಬನಿಂದ 5 ಲಕ್ಷ ಕಮೀಷನ್ ಪಡೆಯುತ್ತಿದ್ದಂತ ವೇಳೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಎಂಬುವರು ಗುತ್ತಿಗೆದಾರನೊಬ್ಬನಿಗೆ 5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಶಾಸಕ ಚಂದ್ರು ಲಮಾಣಿಗೆ ಸೇರಿದಂತ ಬಾಲಾಜಿ ಆಸ್ಪತ್ರೆ ಮೇಲೆ ಈ ಸಂಬಂಧ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಬಿಜೆಪಿ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.