ನವದೆಹಲಿ: ದೇಶದ ಯುವಜನರನ್ನು ಅರಾಜಕ ರಾಜಕೀಯದ ದಾಳಗಳನ್ನಾಗಿ ಪರಿವರ್ತಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಬೆಳವಣಿಗೆಗಳ ಮಾದರಿಯಲ್ಲಿ ಭಾರತದಲ್ಲಿಯೂ ಆಡಳಿತ ಬದಲಾವಣೆಗೆ ಕೆಲವು ಗುಂಪುಗಳು ತಂತ್ರ ರೂಪಿಸುತ್ತಿವೆ ಎಂದು ಅವರು ದೂರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್, ಆಡಳಿತ ಬದಲಾವಣೆಗಾಗಿ ಬಾಂಗ್ಲಾದೇಶದಲ್ಲಿ ತರಬೇತಿ ಪಡೆದಿರುವುದಾಗಿ ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಬೀದಿಗಿಳಿದು ಹೋರಾಟ ನಡೆಸುವ ಮೂಲಕ ಸರ್ಕಾರವನ್ನು ಉರುಳಿಸಬೇಕು ಎಂದು ಇನ್ನು ಕೆಲವರು ಪ್ರತಿಪಾದಿಸಿದ್ದಾರೆ ಎಂದು ತಿಳಿಸಿದರು.
ಇಂತಹ ಹೇಳಿಕೆಗಳು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸಿ ದೇಶದಲ್ಲಿ ಅಶಾಂತಿ ಸೃಷ್ಟಿಸುವುದೇ ಈ ಗುಂಪುಗಳ ಉದ್ದೇಶ ಎಂಬುದನ್ನು ತೋರಿಸುತ್ತವೆ ಎಂದು ಅವರು ಆರೋಪಿಸಿದರು.

ಚಳವಳಿಯಲ್ಲಿ ತೊಡಗಿಸಿಕೊಂಡಿರುವವರ ಉದ್ದೇಶಗಳ ಕುರಿತು ಪ್ರಶ್ನೆ ಎತ್ತಿದ ರಕ್ಷಣಾ ಸಚಿವರು, ‘ಆಡಳಿತ ಬದಲಾವಣೆ’ ಎಂಬ ಪದದ ಬಳಕೆಯೇ ಅವರ ನೈಜ ಉದ್ದೇಶಗಳ ಬಗ್ಗೆ ಕಳವಳ ಮೂಡಿಸುತ್ತದೆ ಎಂದು ಹೇಳಿದರು.
ಈ ಚಳವಳಿ ಚುನಾವಣಾ ಸುಧಾರಣೆ ಅಥವಾ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವಲ್ಲ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡ ಅಭಿಯಾನವೂ ಅಲ್ಲ; ದೇಶದ ನಾಗರಿಕರ ಭವಿಷ್ಯವನ್ನು ಕೇಂದ್ರವಾಗಿಟ್ಟುಕೊಂಡ ಪ್ರಯತ್ನವೂ ಅಲ್ಲ ಎಂದು ಸಿಂಗ್ ಅಭಿಪ್ರಾಯಪಟ್ಟರು.
ಬದಲಾಗಿ, ಅರಾಜಕತೆಯನ್ನು ಸೃಷ್ಟಿಸಿ ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳುವುದೇ ಈ ಗುಂಪುಗಳ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು. ಯುವಜನರು ಇಂತಹ ರಾಜಕೀಯ ಪ್ರಯತ್ನಗಳ ಭಾಗವಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವನ್ನು ರಕ್ಷಣಾ ಸಚಿವರು ನೀಡಿದರು.



