ಬೆಂಗಳೂರು: ರೈತರ ಬದುಕಿನ ಪ್ರಶ್ನೆಯಾಗಿರುವ ಹಾಲಿನ ಬೆಲೆ ಏರಿಕೆಗೆ ಜನಸಾಮಾನ್ಯರು ಆಕ್ಷೇಪ ವ್ಯಕ್ತಪಡಿಸಬಾರದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ಮನವಿ ಮಾಡಿದರು.
ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ, ಗುರುದೇವ ನಾರಾಯಣ ಕುಮಾರ್ ನೇತೃತ್ವದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶು ಆಹಾರ, ರಸಗೊಬ್ಬರ, ಬೀಜ, ಕೀಟನಾಶಕ ಸೇರಿದಂತೆ ಕೃಷಿ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಹೈನುಗಾರಿಕೆ ನಡೆಸುವ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಎಲ್ಲ ವಸ್ತುಗಳ ಬೆಲೆ ಏರಿಕೆಯಾದರೂ ರೈತರ ಉತ್ಪನ್ನಗಳಾದ ಹಾಲು, ತರಕಾರಿ ಮತ್ತು ಹಣ್ಣುಗಳ ಬೆಲೆ ಹೆಚ್ಚಾದಾಗ ಮಾತ್ರ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತವೆ. ದೊಡ್ಡ ಮಾಲ್ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಚೌಕಾಸಿ ಮಾಡದವರು ರೈತರ ಉತ್ಪನ್ನಗಳ ಬೆಲೆ ಏರಿಕೆಗೆ ವಿರೋಧಿಸುವುದು ಸರಿಯಲ್ಲ ಎಂದು ಟೀಕಿಸಿದರು. ರೈತರ ಸಂಕಷ್ಟ ಅರಿತು ಸರ್ಕಾರ ಹಾಲಿನ ಬೆಲೆ ಹೆಚ್ಚಿಸಿದ್ದು, ನಗರವಾಸಿಗಳು ಇದನ್ನು ವಿರೋಧಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಬೆಂಗಳೂರು ಸೇರಿದಂತೆ ರಾಜ್ಯದ ಕಂಪನಿ ಮತ್ತು ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಶೇ.60ರಷ್ಟು ಉದ್ಯೋಗ ಮೀಸಲಿಡುವಂತೆ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಎಐ ತಂತ್ರಜ್ಞಾನದ ಬಳಕೆಯ ನೆಪದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿದ್ದು, ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ ಎಂಬ ಕಾರಣ ನೀಡಿ ಬೇರೆ ರಾಜ್ಯಗಳ ಯುವಕರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.


