BIG NEWS: ಸಾಗರದ ‘ಕೆಳದಿ ಜಿಲ್ಲಾ ಪಂಚಾಯ್ತಿ ಕ್ಷೇತ್ರ’ದಿಂದ ‘ಧರ್ಮೇಂದ್ರ ಶಿರವಾಳ’ ಸ್ಪರ್ಧೆ ಬಹುತೇಕ ಖಚಿತ | Zilla Panchayat Elections

Dharmendra Shiravala contest from Keladi Zilla Panchayat Kshetra of Sagara is almost certain

ಶಿವಮೊಗ್ಗ: ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ(Zilla Panchayat Elections) ಸಾಗರ ತಾಲೂಕಿನ ಕೆಳದಿ ಕ್ಷೇತ್ರದಿಂದ ಜನಾನುರಾಗಿ ಸಮಾಜ ಸೇವಕ ಧರ್ಮೇಂದ್ರ ಶಿರವಾಳ(Dharmendra Shiravala) ಅವರು ಕಾಂಗ್ರೆಸ್ ಪಕ್ಷದ(Congress Party) ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಯಾವುದೇ ಅಧಿಕಾರದ ಆಸೆಯಿಲ್ಲದೆ, ಕೇವಲ ಜನಸಂಪರ್ಕ ಮತ್ತು ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಗುಣವೇ ಇಂದು ಅವರನ್ನು ಕೆಳದಿ ಭಾಗದಲ್ಲಿ(Keladi) ಪ್ರಭಾವಿ ನಾಯಕರನ್ನಾಗಿ ರೂಪಿಸಲು ಸಜ್ಜಾಗಿದೆ.

ರಾಜಕೀಯ ಹಿನ್ನೆಲೆ ಹಾಗೂ ಸಂಘಟನಾ ಶಕ್ತಿ

ಧರ್ಮೇಂದ್ರ ಶಿರವಾಳ ಅವರ ರಾಜಕೀಯ ಪ್ರವೇಶವು ಸವಾಲುಗಳಿಂದಲೇ ಆರಂಭವಾಯಿತು. ಸುಮಾರು ಒಂದು ದಶಕದ ಹಿಂದೆ ನಡೆದ ಜಿ.ಪಂ ಚುನಾವಣೆಯಲ್ಲಿ ಇವರ ಸಹೋದರ ತುಕಾರಾಮ್ ಶಿರವಾಳ ಅವರು ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಸಂಘಟನಾತ್ಮಕವಾಗಿ ಶ್ರಮಿಸಿದ್ದ ಧರ್ಮೇಂದ್ರ ಅವರು, ಹೆಚ್ಚು ಮತಗಳನ್ನು ಗಳಿಸಿಕೊಡುವಲ್ಲಿ ಬೆನ್ನೆಲುಬಾಗಿ ನಿಂತು ತಮ್ಮ ರಾಜಕೀಯ ಶಕ್ತಿಯನ್ನು ಸಾಬೀತುಪಡಿಸಿದ್ದರು.

ರೈತರು ಹಾಗೂ ಬಡವರ ಪರ ಗಟ್ಟಿ ಧ್ವನಿ

ಆಡಳಿತ ವ್ಯವಸ್ಥೆ ಮತ್ತು ಅಧಿಕಾರಿಗಳ ಧೋರಣೆಯ ವಿರುದ್ಧ ಸದಾ ಜನಸಾಮಾನ್ಯರ ಪರವಾಗಿ ನಿಲ್ಲುವ ಧರ್ಮೇಂದ್ರ ಅವರು, ಅರಣ್ಯ ಇಲಾಖೆಯ ದೌರ್ಜನ್ಯಗಳ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿ ಗಮನ ಸೆಳೆದಿದ್ದರು. ಬಳಿಕ ಅರಣ್ಯ ಗುತ್ತಿಗೆದಾರರ ಸಂಘದ ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದರೂ, ಗುತ್ತಿಗೆದಾರರ ಹಿತದ ಜೊತೆಗೆ, ಬಡವರು ಮತ್ತು ರೈತರ ಭೂಮಿ, ಅರಣ್ಯ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದನ್ನೇ ತಮ್ಮ ಆದ್ಯತೆಯನ್ನಾಗಿಸಿಕೊಂಡರು.

ತಾಲೂಕು ಕಚೇರಿ, ಪೊಲೀಸ್ ಠಾಣೆ, ಆರೋಗ್ಯ ಇಲಾಖೆ, ಮೆಸ್ಕಾಂ ಹೀಗೆ ನಾನಾ ಇಲಾಖೆಗಳಲ್ಲಿ ಜನಸಾಮಾನ್ಯರ ಕಷ್ಟಗಳಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ತಮ್ಮ ಬಳಿ ಸಹಾಯ ಕೋರಿ ಬಂದ ಜನರಿಗೆ ಊಟ, ಉಪಹಾರ ನೀಡಿ ಪ್ರೀತಿಯಿಂದ ಸತ್ಕರಿಸಿ ಕಳಿಸುವ ಇವರ ಸರಳ ವ್ಯಕ್ತಿತ್ವವು ತಳಮಟ್ಟದಲ್ಲಿ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಪರವಾಗಿ ಧರ್ಮೇಂದ್ರ ಶಿರವಾಳ ಅವರು ನಡೆಸಿದ ಪ್ರಚಾರ ಕಾರ್ಯ ಶ್ಲಾಘನೀಯ. ಕಸಬಾ ಹೋಬಳಿಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಇವರು, ಸ್ವಂತ ಖರ್ಚಿನಲ್ಲಿ ನಿರಂತರ ಓಡಾಟ ನಡೆಸಿ ಪಕ್ಷ ಸಂಘಟನೆ ಮಾಡಿದ್ದರು. ಅಷ್ಟೇ ಅಲ್ಲದೆ, ಸಾಗರದಿಂದ ಆರಂಭಿಸಿ ಕಸಬಾ ಹೋಬಳಿಯಾದ್ಯಂತ 1,000ಕ್ಕೂ ಹೆಚ್ಚು ಬೈಕ್‌ಗಳ ಬೃಹತ್ ರ‍್ಯಾಲಿ ಸಂಘಟಿಸುವ ಮೂಲಕ ಕಾಂಗ್ರೆಸ್ ಪರ ಭರ್ಜರಿ ಜನಬೆಂಬಲ ವ್ಯಕ್ತವಾಗುವಂತೆ ಮಾಡಿದ್ದರು.

ಕೆಳದಿ ಕ್ಷೇತ್ರದಿಂದ ಕಣಕ್ಕೆ ಸಿದ್ಧತೆ

ಧರ್ಮೇಂದ್ರ ಅವರ ಸತತ ಜನಸಂಪರ್ಕ, ತಳಮಟ್ಟದ ಜನಪ್ರಿಯತೆ ಹಾಗೂ ಪಕ್ಷನಿಷ್ಠೆಯನ್ನು ಗಮನಿಸಿರುವ ಕಾಂಗ್ರೆಸ್ ವರಿಷ್ಠರು, ಈ ಬಾರಿ ಕೆಳದಿ ಜಿ.ಪಂ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸುವಂತೆ ಸೂಚಿಸಿದ್ದಾರೆ. ಕುಟುಂಬದ ಹಿರಿಯರೊಂದಿಗೆ ಸಮಾಲೋಚನೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆಯಾಗುವ ನಿರೀಕ್ಷೆಯಿದೆ. ಕೆಳದಿ ಕ್ಷೇತ್ರದ ಪ್ರಜ್ಞಾವಂತ ಮತದಾರರ ಆಶೀರ್ವಾದದೊಂದಿಗೆ ಕಣಕ್ಕಿಳಿದು ಗೆಲುವಿನ ನಗೆ ಬೀರುವ ವಿಶ್ವಾಸವನ್ನು ಧರ್ಮೇಂದ್ರ ಶಿರವಾಳ ಅವರಲ್ಲಿದೆ.

ಈ ಬಾರಿ ಕೆಳದಿ ಜಿಲ್ಲಾ ಪಂಚಾಯ್ತಿ ಕ್ಷೇತ್ರವು ಸಾಮಾನ್ಯ ಮೀಸಲು ಅಭ್ಯರ್ಥಿಗೆ ಬಂದಿದೆ. ಧರ್ಮೇಂದ್ರ ಶಿರವಾಳ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಫೈನಲ್ ಎಂದೇ ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಘೋಷಣೆಯಾಗಿ, ಮುಂಬರುವ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಧರ್ಮೇಂದ್ರ ಶಿರವಾಳ ಗೆದ್ದು, ರಾಜಕೀಯದ ಗದ್ದುಗೆ ಏರಲಿ ಎಂಬುದು ಅವರ ಅಪಾರ ಅಭಿಮಾನಿಗಳ ಆಸೆಯಾಗಿದೆ. ಅದು ಸಾಧ್ಯವಾಗಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.