ಬೆಂಗಳೂರು: “ಜೀ ಹುಜೂರು ಎನ್ನುವ ಬಿಜೆಪಿಯ ಸಂಸ್ಕೃತಿಯನ್ನು ನನ್ನಿಂದ ನಿರೀಕ್ಷೆ ಮಾಡುವುದು ಮೂರ್ಖತನ” ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ನಾಯಕರ ಟೀಕೆಗಳಿಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಹಲವು ಆರೋಪಗಳನ್ನು ಮಾಡಿದರು.
“Basic Etiquettes ಬಗ್ಗೆ ಮಾತನಾಡುವ ಮೊದಲು ತಮ್ಮ ಪಕ್ಷದ ನಾಯಕರಿಗೆ ಸಾರ್ವಜನಿಕ ಭಾಷೆಯ ಪಾಠ ಹೇಳಲಿ. ಬಿಜೆಪಿಯ ನಾಯಕರ ಭಾಷೆಗೆ ಅವರದ್ದೇ ರೀತಿಯಲ್ಲಿ ಉತ್ತರಿಸುತ್ತೇನೆ. ‘ಜೀ ಹುಜೂರು’ ಸಂಸ್ಕೃತಿ ನನ್ನದಲ್ಲ” ಎಂದು ಹರಿಪ್ರಸಾದ್ ಹೇಳಿದ್ದಾರೆ.

ಪ್ರಹ್ಲಾದ್ ಜೋಶಿ ಅವರ ಸಹೋದರನ ವಿರುದ್ಧದ ಆರೋಪಗಳನ್ನು ಉಲ್ಲೇಖಿಸಿದ ಅವರು, “ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕತೆ ಮೊದಲು ಇರಲಿ” ಎಂದು ಟೀಕಿಸಿದ್ದಾರೆ.
ಆರ್‌ಎಸ್‌ಎಸ್ ಕುರಿತು ಮಾತನಾಡಿದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಹಿಂದೆ ಪ್ರಹ್ಲಾದ್ ಜೋಶಿ ಕುರಿತು ಮಾಡಿದ್ದ ಟೀಕೆಗಳನ್ನು ಉಲ್ಲೇಖಿಸಿ, “ಅಂತಹ ವ್ಯಕ್ತಿಯೊಂದಿಗೆ ಗಂಭೀರ ಚರ್ಚೆ ನಡೆಸುವ ಅಗತ್ಯವಿಲ್ಲ” ಎಂದಿದ್ದಾರೆ.
1984ರ ಸಿಖ್ ಹತ್ಯಾಕಾಂಡದ ಬಗ್ಗೆ ಬಿಜೆಪಿ ಟೀಕೆಗೆ ಉತ್ತರಿಸಿದ ಹರಿಪ್ರಸಾದ್, ಕಾಂಗ್ರೆಸ್ ಈ ಕುರಿತು ವಿಷಾದ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಹೇಳಿದರು. ಇದೇ ಧೈರ್ಯದಿಂದ 2002ರ ಗುಜರಾತ್ ಗಲಭೆಗಳ ಬಗ್ಗೆ ಬಿಜೆಪಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
“Basic Etiquettes” ನ ಪಿತಾಮಹ @JoshiPralhad , ಮೊದಲು ತಮ್ಮ ಪಕ್ಷದ ನಾಯಕರಿಗೆ ಹಾಗೂ ಅದರ ಬಾಲಗೊಂಚಿ ಭಕ್ತರಿಗೆ ಸಾರ್ವಜನಿಕ ಭಾಷೆಯ ಬಗ್ಗೆ ಪಾಠ ಮಾಡಲಿ. ಪೋಕ್ಸೋ ಆರೋಪಿಗಳನ್ನು, ಚೆಕ್ ಮೂಲಕ ಲಂಚ ಪಡೆದು, ತಮ್ಮದೇ ಪಕ್ಷದ ನಾಯಕರಿಂದ “ಎಳಸು” ಅಧ್ಯಕ್ಷ ಎಂದು ಬಿರುದಾಂಕಿತರ ಸಾರ್ವಜನಿಕ ಭಾಷೆಯನ್ನು ಅವರದ್ದೇ ಭಾಷೆಯಲ್ಲಿ ಉತ್ತರಿಸುತ್ತೇನೆ…
— Hariprasad.B.K. (@HariprasadBK2) July 12, 2026
ಬಿಲ್ಕಿಸ್ ಬಾನು ಪ್ರಕರಣ, ಗುಜರಾತ್ ಗಲಭೆ ಹಾಗೂ ಇತರ ಘಟನೆಗಳನ್ನು ಉಲ್ಲೇಖಿಸಿದ ಅವರು, “ನಾನು ಜಾತಿ ಅಥವಾ ಧರ್ಮದ ಹೆಸರಿನಲ್ಲಿ ಗೂಂಡಾಗಿರಿ ಮಾಡಿಲ್ಲ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಟದ ಮೂಲಕ ರಾಜಕೀಯ ಮಾಡುತ್ತಿದ್ದೇನೆ” ಎಂದು ಹೇಳಿದ್ದಾರೆ.


