ನವದೆಹಲಿ: ಆನ್ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರ ಹಕ್ಕು ಹಾಗೂ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಇ-ಕಾಮರ್ಸ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಹುಡುಕಾಟ ಫಲಿತಾಂಶಗಳ ಕುಶಲ ನಿರ್ವಹಣೆ, ಪ್ರಾಯೋಜಿತ ಪಟ್ಟಿಗಳನ್ನು ಮರೆಮಾಚುವುದು, ದಾರಿ ತಪ್ಪಿಸುವ ರಿಯಾಯಿತಿ, ಗುಪ್ತ ಶುಲ್ಕ ಹಾಗೂ ‘ಡಾರ್ಕ್ ಪ್ಯಾಟರ್ನ್ಸ್’ ಬಳಕೆಗೆ ಹೊಸ ನಿರ್ಬಂಧಗಳನ್ನು ವಿಧಿಸಲಾಗಿದೆ.
ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಸೂಚಿಸಿರುವ ‘ಗ್ರಾಹಕ ರಕ್ಷಣೆ (ಇ-ಕಾಮರ್ಸ್) (ತಿದ್ದುಪಡಿ) ನಿಯಮಗಳು, 2026’ 2027ರ ಜನವರಿ 1ರಿಂದ ಜಾರಿಗೆ ಬರಲಿವೆ.
NCH ಜತೆ ಸಂಯೋಜನೆ ಕಡ್ಡಾಯ
ಹೊಸ ನಿಯಮಗಳ ಪ್ರಕಾರ ಪ್ರತಿಯೊಂದು ಇ-ಕಾಮರ್ಸ್ ಸಂಸ್ಥೆಯೂ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಸಂಯೋಜನಾ ವ್ಯವಸ್ಥೆಯೊಂದಿಗೆ ಪಾಲುದಾರರಾಗುವುದು ಕಡ್ಡಾಯ. ಗ್ರಾಹಕರ ದೂರುಗಳನ್ನು ರಾಷ್ಟ್ರೀಯ ಕುಂದುಕೊರತೆ ಪರಿಹಾರ ವ್ಯವಸ್ಥೆಯೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕಿಸುವುದು ಇದರ ಉದ್ದೇಶ.

2025ರಲ್ಲಿ NCHಗೆ ಒಟ್ಟು 17,71,622 ದೂರುಗಳು ಬಂದಿದ್ದು, ಈ ಪೈಕಿ 5,11,196 ದೂರುಗಳು ಇ-ಕಾಮರ್ಸ್ಗೆ ಸಂಬಂಧಿಸಿದ್ದವು. ಪ್ಲಾಟ್ಫಾರ್ಮ್ಗಳ ಕುಂದುಕೊರತೆ ಅಧಿಕಾರಿಗಳ ಬಳಿ ದಾಖಲಾದ ದೂರುಗಳ ಪ್ರತಿಯನ್ನು ಗ್ರಾಹಕರಿಗೆ ನೀಡಬೇಕಾಗುತ್ತದೆ.
ಹುಡುಕಾಟ, ಜಾಹೀರಾತಿನಲ್ಲಿ ಪಾರದರ್ಶಕತೆ
ಗ್ರಾಹಕರ ಹುಡುಕಾಟಕ್ಕೆ ಸಂಬಂಧಿಸಿದ ಫಲಿತಾಂಶಗಳ ಸೂಕ್ತತೆಗೆ ಧಕ್ಕೆ ತರುವ ರೀತಿಯಲ್ಲಿ ಸರ್ಚ್ ರ್ಯಾಂಕಿಂಗ್ಗಳನ್ನು ಕುಶಲವಾಗಿ ಬದಲಿಸುವಂತಿಲ್ಲ. ಹಣ ಪಾವತಿಸಿ ತೋರಿಸುವ ಸ್ಪಾನ್ಸರ್ಡ್ ಲಿಸ್ಟಿಂಗ್ಗಳನ್ನು ಸ್ಪಷ್ಟವಾಗಿ ಗುರುತಿಸುವುದು ಕಡ್ಡಾಯ.
ರಿಯಾಯಿತಿ ಜಾಹೀರಾತಿನಲ್ಲೂ ಕಡಿತಗೊಳಿಸಿದ ಬೆಲೆಯ ಜತೆಗೆ ಹಿಂದಿನ ಬೆಲೆಯನ್ನು ತೋರಿಸಬೇಕು. ಹಿಂದಿನ ಬೆಲೆ ಎಂದರೆ ಹಿಂದಿನ 30 ದಿನಗಳಲ್ಲಿ ನೀಡಿದ್ದ ಅತ್ಯಂತ ಕಡಿಮೆ ಬೆಲೆ ಎಂದು ನಿಯಮದಲ್ಲಿ ಸ್ಪಷ್ಟಪಡಿಸಲಾಗಿದೆ.
‘ಡಾರ್ಕ್ ಪ್ಯಾಟರ್ನ್ಸ್’ಗೆ ಕಡಿವಾಣ
ಇ-ಕಾಮರ್ಸ್ ಸಂಸ್ಥೆಗಳು 2023ರ ‘ಡಾರ್ಕ್ ಪ್ಯಾಟರ್ನ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿ’ಗಳನ್ನು ಪಾಲಿಸಬೇಕು. ವರ್ಷಕ್ಕೊಮ್ಮೆ ಸ್ವಯಂ ಲೆಕ್ಕಪರಿಶೋಧನೆ ನಡೆಸಿ, ಅನುಸರಣಾ ಪ್ರಮಾಣಪತ್ರವನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕಾಗುತ್ತದೆ.
ಉತ್ಪನ್ನದ ‘ಬೆಸ್ಟ್ ಬಿಫೋರ್’ ದಿನಾಂಕ, ವಾಪಸಿ ಮತ್ತು ಹಣ ಮರುಪಾವತಿ ನೀತಿ ಸೇರಿದಂತೆ ಪ್ರಮುಖ ಮಾಹಿತಿಯನ್ನು ಪ್ಲಾಟ್ಫಾರ್ಮ್ಗಳು ಬಹಿರಂಗಪಡಿಸಬೇಕು. ತಮ್ಮ ವೇದಿಕೆಗೆ ಸಂಬಂಧಿಸದ ಸೇವೆಗಳಿಗೆ ಒಟ್ಟುಗೂಡಿಸಿದ ಶುಲ್ಕ ವಿಧಿಸುವುದಕ್ಕೂ ನಿರ್ಬಂಧ ಹೇರಲಾಗಿದೆ.
ಆಮದು ಉತ್ಪನ್ನಗಳ ಮೂಲ ದೇಶ ಹಾಗೂ ಆಮದುದಾರರ ವಿವರಗಳನ್ನೂ ಕಡ್ಡಾಯವಾಗಿ ಪ್ರಕಟಿಸಬೇಕು. ಹೊಸ ನಿಯಮಗಳು ಡಿಜಿಟಲ್ ಮಾರುಕಟ್ಟೆಯನ್ನು ಹೆಚ್ಚು ಪಾರದರ್ಶಕ, ಜವಾಬ್ದಾರಿಯುತ ಮತ್ತು ಗ್ರಾಹಕ-ಕೇಂದ್ರಿತವಾಗಿಸುವ ಗುರಿ ಹೊಂದಿವೆ.



