ನವದೆಹಲಿ: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಮತ್ತು ನಿವೃತ್ತ ಪಿಂಚಣಿದಾರರಿಗೆ ಭವಿಷ್ಯ ನಿಧಿಗೆ (PF) ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ತಲುಪಿಸುವ ಸಲುವಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಧಿಕೃತ ವಾಟ್ಸಾಪ್ ಚಾನೆಲ್ ಆರಂಭಿಸಿದೆ. ತನ್ನ ಡಿಜಿಟಲ್ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಸುಲಭ ಮತ್ತು ಜನಸ್ನೇಹಿಯಾಗಿಸಲು ಸಂಸ್ಥೆ ಈ ಹೆಜ್ಜೆಯಿಟ್ಟಿದೆ.
ವಾಟ್ಸಾಪ್ ಚಾನೆಲ್‌ನಲ್ಲಿ ಏನೆಲ್ಲಾ ಸಿಗಲಿದೆ?
ಇಪಿಎಫ್‌ಒ ಬಿಡುಗಡೆ ಮಾಡಿರುವ ಈ ನೂತನ ಚಾನೆಲ್ ಮೂಲಕ ಸಂಸ್ಥೆಯ ಪ್ರಮುಖ ಪ್ರಕಟಣೆಗಳು, ಸೇವಾ ನವೀಕರಣಗಳು, ನಿಯಮಾವಳಿಗಳ ಬದಲಾವಣೆ ಹಾಗೂ ಪಿಂಚಣಿದಾರರಿಗೆ ಅಗತ್ಯವಿರುವ ಕಾಲಮಿತಿಯ ಅಧಿಕೃತ ಮಾಹಿತಿ ನೇರವಾಗಿ ಮೊಬೈಲ್‌ಗೆ ತಲುಪಲಿದೆ. ಇದರಿಂದಾಗಿ ಸದಸ್ಯರು ಪ್ರತಿಯೊಂದು ಸಣ್ಣ ಅಪ್‌ಡೇಟ್‌ಗಾಗಿ ವೆಬ್‌ಸೈಟ್‌ಗಳನ್ನು ಜಾಲಾಡುವ ಅಗತ್ಯ ತಪ್ಪಲಿದೆ. ಸಂಸ್ಥೆ ಹಂಚಿಕೊಂಡಿರುವ ಅಧಿಕೃತ ಲಿಂಕ್ ಅಥವಾ ಕ್ಯೂಆರ್ (QR) ಕೋಡ್ ಬಳಸಿ ಸದಸ್ಯರು ಈ ಚಾನೆಲ್ ಫಾಲೋ ಮಾಡಬಹುದು.
ಬ್ಯಾಲೆನ್ಸ್ ಚೆಕ್ ಅಥವಾ ಹಣ ಹಿಂಪಡೆಯಲು ಸಾಧ್ಯವೇ?
ಈ ವಾಟ್ಸಾಪ್ ಚಾನೆಲ್ ಕೇವಲ ಮಾಹಿತಿ ವಿನಿಮಯಕ್ಕಾಗಿ ಮೀಸಲಾಗಿರುವ ಅಧಿಕೃತ ವೇದಿಕೆಯಾಗಿದ್ದು, ಸದಸ್ಯರ ವೈಯಕ್ತಿಕ ಸೇವೆಗಳಿಗೆ ಪರ್ಯಾಯವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಚಂದಾದಾರರು ಈ ವಾಟ್ಸಾಪ್ ಚಾನೆಲ್ ಮೂಲಕ ನೇರವಾಗಿ ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು, ಕ್ಲೈಮ್ ಸ್ಥಿತಿ ತಿಳಿಯುವುದು ಅಥವಾ ಹಣ ಹಿಂಪಡೆಯುವಿಕೆ (Withdrawal) ಪ್ರಕ್ರಿಯೆಗಳನ್ನು ನಡೆಸಲು ಅವಕಾಶವಿಲ್ಲ. ವೈಯಕ್ತಿಕ ಹಣಕಾಸು ವ್ಯವಹಾರಗಳಿಗೆ ಎಂದಿನಂತೆ ಇಪಿಎಫ್‌ಒ ಅಧಿಕೃತ ಪೋರ್ಟಲ್ ಹಾಗೂ ಉಮಾಂಗ್ (UMANG) ಆ್ಯಪ್ ಅನ್ನೇ ಬಳಸಬೇಕಾಗುತ್ತದೆ.
ಯುಪಿಐ ವಿತ್‌ಡ್ರಾವಲ್ ಯೋಜನೆ ಪ್ರತ್ಯೇಕ
ಇದೇ ವೇಳೆ, ಯುಪಿಐ (UPI) ಮೂಲಕ ಪಿಎಫ್ ಖಾತೆಯಿಂದ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿಕೊಳ್ಳುವ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗಗಳು ಮುಕ್ತಾಯಗೊಂಡಿದ್ದು, ಅದು ಶೀಘ್ರದಲ್ಲೇ ಜಾರಿಗೆ ಬರಲಿದೆ. ಆದರೆ, ಆ ಯುಪಿಐ ಆಧಾರಿತ ಹಣ ಹಿಂಪಡೆಯುವ ಸೌಲಭ್ಯ ಪ್ರತ್ಯೇಕ ಯೋಜನೆಯಾಗಿದ್ದು, ಅದಕ್ಕೂ ಈ ವಾಟ್ಸಾಪ್ ಮಾಹಿತಿ ಚಾನೆಲ್‌ಗೂ ಯಾವುದೇ ನೇರ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಪಿಎಫ್ ಸೇವೆ ನೀಡುವ ಸೋಗಿನಲ್ಲಿ ಬರುವ ಅನಧಿಕೃತ ಮೆಸೇಜ್‌ಗಳು ಅಥವಾ ನಕಲಿ ಲಿಂಕ್‌ಗಳ ಬಲೆಗೆ ಬೀಳದೆ, ಅಧಿಕೃತ ವಾಟ್ಸಾಪ್ ಚಾನೆಲ್ ಮಾತ್ರ ಬಳಸುವಂತೆ ಚಂದಾದಾರರಿಗೆ ಎಚ್ಚರಿಕೆ ನೀಡಲಾಗಿದೆ.



