ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ-03 ರ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಾಸಸ್ಥಳದಿಂದ ಶಾಲಾ/ಕಾಲೇಜಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಿ ವಿತರಣೆ ಮಾಡುತ್ತಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷೆ-03 ಬೇರೆ ಬೇರೆ ಶಾಲಾ/ಕಾಲೇಜುಗಳಲ್ಲಿ ಇರುವುದರಿಂದ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಕೆಳಕಂಡ ಸೌಲಭ್ಯಗಳನ್ನು ಕಲ್ಪಿಸಿರುತ್ತದೆ.
• ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ದಿನಾಂಕ 05.07.2025 ರಿಂದ 12.07.2025 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
• ಎಸ್.ಎಸ್.ಎಲ್.ಸಿ ಪರೀಕ್ಷಾ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು.
• ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದಲ್ಲಿ ಕಾರ್ಯಾಚರಣೆ ಮಾಡಲಾಗುವುದು.
• ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು/ಪೋಷಕರು ಕೋರಿಕೆ ನಿಲುಗಡೆ ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಲಾಗಿದೆ.




