ಜಾಗತಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆಗೆ ಕರ್ನಾಟಕದಿಂದ ಹಂಪಿ, ಮೈಸೂರು, ಲಕ್ಕುಂಡಿ ಶಿಫಾರಸು: ಸಚಿವ ಕೆ ಜೆ ಜಾರ್ಜ್

ವಿಜಯನಗರ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಗ್ಲೋಬಲ್ ಡೆಸ್ಟಿನೇಷನ್ ಡೆವಲಪ್‌ಮೆಂಟ್’ ಯೋಜನೆಯಡಿ ಹಂಪಿ, ಮೈಸೂರು ಹಾಗೂ ಲಕ್ಕುಂಡಿ ಸೇರಿದಂತೆ ರಾಜ್ಯದ ಮೂರು ಪ್ರಮುಖ ಐತಿಹಾಸಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಹಂಪಿಯಲ್ಲಿ ಇಂದು ನಡೆದ ರಾಜ್ಯಮಟ್ಟದ ಉನ್ನತ ಮಟ್ಟದ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಸಲ್ಲಿಸಲಾಗುವ ಸಮಗ್ರ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವ ಅಂತಿಮ ತಾಣಗಳನ್ನು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಆಯ್ಕೆ ಮಾಡಲಿದೆ ಎಂದು ಹೇಳಿದರು.

ಆಯ್ಕೆಯಾಗುವ ಪ್ರವಾಸಿ ತಾಣಗಳಿಗೆ ಮೊದಲ ಹಂತದಲ್ಲಿ ₹500 ಕೋಟಿ ಹಾಗೂ ಎರಡನೇ ಹಂತದಲ್ಲಿ ₹300 ಕೋಟಿ ಸೇರಿದಂತೆ ಒಟ್ಟು ₹800 ಕೋಟಿ ಕೇಂದ್ರ ನೆರವು ದೊರೆಯುವ ನಿರೀಕ್ಷೆಯಿದೆ. ಇದರೊಂದಿಗೆ ರಾಜ್ಯ ಸರ್ಕಾರ ಹಾಗೂ ಖಾಸಗಿ ವಲಯದ ಸಹಭಾಗಿತ್ವದ ಮೂಲಕ ಹೆಚ್ಚುವರಿ ಹೂಡಿಕೆಯನ್ನು ಆಕರ್ಷಿಸಿ, ಆಯ್ಕೆಯಾದ ತಾಣಗಳನ್ನು ವಿಶ್ವದರ್ಜೆಯ ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.

ಹಂಪಿ, ಮೈಸೂರು ಹಾಗೂ ಲಕ್ಕುಂಡಿಯ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಸಾಮರ್ಥ್ಯವನ್ನು ಆಧರಿಸಿ ವಿಶ್ವದರ್ಜೆಯ ಮೂಲಸೌಕರ್ಯ, ಪ್ರವಾಸಿಗರ ಅನುಭವ, ಸಂಪರ್ಕ ವ್ಯವಸ್ಥೆ, ಪರಂಪರೆ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ ಖಾಸಗಿ ಹೂಡಿಕೆಗೆ ಆದ್ಯತೆ ನೀಡುವ ಸಮಗ್ರ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಬಹು ಇಲಾಖೆಗಳ ಸಮನ್ವಯದಲ್ಲಿ ಅಭಿವೃದ್ಧಿ

ಹಂಪಿಯ ಅಭಿವೃದ್ಧಿಯು ಪ್ರವಾಸೋದ್ಯಮ ಇಲಾಖೆಯೊಂದರ ಜವಾಬ್ದಾರಿಯಲ್ಲ. ನಗರಾಭಿವೃದ್ಧಿ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣ (ASI), ರಾಜ್ಯ ಪುರಾತತ್ವ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಸಚಿವರು ಹಾಗೂ ಪಂಚಾಯತ್ ರಾಜ್ ಸಚಿವರ ನೇತೃತ್ವದಲ್ಲಿ ಶೀಘ್ರದಲ್ಲೇ ಜಂಟಿ ಸಭೆ ನಡೆಸಿ, ಹಂಪಿಯ ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಹಂಪಿ ಉತ್ಸವಕ್ಕೆ ಹೊಸ ಆಯಾಮ

ಮೈಸೂರು ದಸರೆಯ ಮಾದರಿಯಲ್ಲಿ ಹಂಪಿ ಉತ್ಸವವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ವೈಭವಯುತವಾಗಿ ಆಯೋಜಿಸಲು ಸರ್ಕಾರ ಬದ್ಧವಾಗಿದೆ. ಉತ್ಸವದ ದಿನಾಂಕ ಹಾಗೂ ಕಾರ್ಯಕ್ರಮಗಳ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.