ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಜೆಸಿಬಿ ಮೆಕ್ಯಾನಿಕ್ ರುಂಡ-ಮುಂಡ ಕಟ್! 

ಹುಬ್ಬಳ್ಳಿ: ನಗರದ ಕುಂದಗೋಳ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ಎದೆ ನಡುಗಿಸುವಂತಹ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತೀ ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ, ಡಿಕ್ಕಿಯ ರಭಸಕ್ಕೆ ವ್ಯಕ್ತಿಯ ರುಂಡ ಮತ್ತು ಮುಂಡ ಪ್ರತ್ಯೇಕವಾಗಿ ಬಿದ್ದಿರುವ ಘನಘೋರ ಘಟನೆ ನಡೆದಿದೆ.

ಘಟನೆಯ ವಿವರ

ಮೃತ ವ್ಯಕ್ತಿಯನ್ನು ಶೆರವಾಡ ಗ್ರಾಮದ ನಿವಾಸಿ ಸದಾನಂದ ಕಟೇಗಾರ ಎಂದು ಗುರುತಿಸಲಾಗಿದೆ. ಸದಾನಂದ ಅವರು ಕುಂದಗೋಳ ರಸ್ತೆಯ ಬದಿಯಲ್ಲಿ ಜೆಸಿಬಿ ಯಂತ್ರವನ್ನು ರಿಪೇರಿ ಮಾಡುತ್ತಿದ್ದರು. ಈ ವೇಳೆ ಅತೀ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ನೇರವಾಗಿ ಸದಾನಂದ ಅವರಿಗೆ ಗುದ್ದಿದೆ.

ಇಂಜಿನ್ ಒಳಗೇ ಸಿಲುಕಿದ ತಲೆ!

ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಕಾರು ಡಿಕ್ಕಿಯಾದ ಕ್ಷಣಾರ್ಧದಲ್ಲೇ ಸದಾನಂದ ಅವರ ದೇಹ ಎರಡು ಭಾಗವಾಗಿದೆ. ರುಂಡವು ದೇಹದಿಂದ ಬೇರ್ಪಟ್ಟು ಕಾರಿನ ಮುಂಭಾಗದ ಇಂಜಿನ್ ಒಳಗೆ ಹೋಗಿ ಬಿದ್ದಿದ್ದರೆ, ಮುಂಡವು ರಸ್ತೆಯ ಇನ್ನೊಂದು ಬದಿಗೆ ಎಸೆಯಲ್ಪಟ್ಟಿದೆ. ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಈ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ.

ಕಾರಿನಲ್ಲಿದ್ದವರಿಗೆ ಗಾಯ

ಅಪಘಾತಕ್ಕೀಡಾದ ಕಾರಿನಲ್ಲಿದ್ದ ಐವರು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತೀ ವೇಗದ ಚಾಲನೆಯೇ ಈ ಭೀಕರ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ದೇಹದ ಭಾಗಗಳನ್ನು ಕಂಡು ಸ್ಥಳೀಯರು ಕಂಬನಿ ಮಿಡಿದರು.