ಶಿವಮೊಗ್ಗ: ನಿನ್ನೆ ಸಾಗರದ ಐಬಿಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ತಾಲ್ಲೂಕಿನಲ್ಲಿ ಮಳೆಹಾನಿ ಸಂಬಂಧ ಸಭೆ ನಡೆಸಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು. ಆದರೇ ನಾನು ಸಭೆ ನಡೆಸಿಲ್ಲ, ಸಾಗರ ಇಒ ಕರೆದಿದ್ದಂತ ಸಭೆಯಲ್ಲಿ ಭಾಗಿಯಾಗಿರುತ್ತೇವೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಸಮಜಾಯಿಷಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ದಿನಾಂಕ 16-06-2025ರಂದು ಸಾಗರ ತಾಲ್ಲೂಕು ಕಾರ್ಯನಿರ್ವಹಣಾ ಅಧಿಕಾರಿಯವರು ಐಬಿಯಲ್ಲಿ ತುರ್ತು ಅಧಿಕಾರಿಗಳ ಸಭೆ ಕರೆದಿದ್ದರು. ಸದರಿ ಸಭೆಗೆ ನಾನು ಮತ್ತು ವಿಶೇಷ ಅಧಿಕಾರಿಗಳಾದ ಟಿ.ಪಿ ರಮೇಶ್ ಭಾಗಿಯಾಗಿರುತ್ತೇವೆ ಎಂದಿದ್ದಾರೆ.
ನಾವು ಯಾವುದೇ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಿಲ್ಲ. ಮಾನ್ಯ ಶಾಸಕರ ನಿರ್ದೇಶನಗಳನ್ನು ಸಭೆಯಲ್ಲಿದ್ದ ಅಧಿಕಾರಿಗಳ ಗಮನಕ್ಕೆ ತಂದಿರುತ್ತೇವೆ. ಅದರ ಹೊರತುಪಡಿಸಿ ಬೇರೆ ಯಾವುದೇ ಸೂಚನೆಯನ್ನು ನೀಡಿರುವುದಿಲ್ಲವೆಂದು ಸ್ಪಷ್ಟ ಪಡಿಸಿದ್ದಾರೆ.
ಅಂದಹಾಗೇ ಇಂದು ಸಾಗರ ನಗರಸಭೆಯ ಸಾಮಾನ್ಯ ಸಭೆಯಲ್ಲೂ ಸದಸ್ಯ ಗಣೇಶ್ ಪ್ರಸಾದ್ ಅವರು ಈ ವಿಷಯ ಪ್ರಸ್ತಾಪಿಸಿದ್ದರು. ಅವರೊಬ್ಬ ಕೆ ಎಸ್ ಆರ್ ಟಿಸಿ ನೌಕರ ಅಷ್ಟೇ. ಈಗ ಶಾಸಕರ ಆಪ್ತ ಕಾರ್ಯದರ್ಶಿಯಾಗಿದ್ದಾರೆ. ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲು ಅವಕಾಶ ಇದ್ಯಾ? ಪೌರಾಯುಕ್ತರೇ, ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರೇ ನಿಮಗೇನಾದರೂ ಕರೆ ಬಂದಿತ್ತಾ ಭಾಗಿಯಾಗಲು ಎಂಬುದಾಗಿ ಪ್ರಶ್ನಿಸಿದ್ದರು.
ಈ ವ್ಯಾಪಕ ಚರ್ಚೆಯ ಕಾರಣದಿಂದ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ ನಾವು ಸಭೆ ಕರೆದಿದ್ದಲ್ಲ, ಇಒ ಕರೆದಿದ್ದಂತ ಸಭೆಯಲ್ಲಿ ಭಾಗಿಯಾಗಿ ಶಾಸಕರ ನಿರ್ದೇಶನಗಳನ್ನು ಸಭೆಯಲ್ಲಿದ್ದಂತ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.




