“ಬ್ಯಾಲೆಟ್ ಪೇಪರ್ ಮೂಲಕ ನಡೆದ ಚುನಾವಣೆಯಲ್ಲೂ ಎನ್‌ಡಿಎಗೆ ಗೆಲುವು; ಈಗೇನು ನೆಪ ಹೇಳುತ್ತೀರಿ?” ಎಂದು ಕಾಂಗ್ರೆಸ್’ಗೆ ಜೆಡಿಎಸ್ ಪ್ರಶ್ನೆ

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಗೆಲುವು ಸಾಧಿಸಿರುವುದನ್ನು ಉಲ್ಲೇಖಿಸಿ, ಜೆಡಿಎಸ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ. ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಜೆಡಿಎಸ್, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆದ ಚುನಾವಣೆಯಲ್ಲಿ ಶಿಕ್ಷಕರು ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಿರುವುದನ್ನು ಪ್ರಸ್ತಾಪಿಸಿದೆ.

“ಮಾನ್ಯ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರೇ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ರಾಜ್ಯದ ಅಧಿಕಾರ ನಿಮ್ಮ ಕೈಯಲ್ಲೇ ಇತ್ತು. ಚುನಾವಣೆ ನಡೆದದ್ದು ಇವಿಎಂ ಮೂಲಕವಲ್ಲ, ಮತಪತ್ರಗಳ ಮೂಲಕ. ಆದರೂ ಶಿಕ್ಷಕರು ಕಾಂಗ್ರೆಸ್ ಆಡಳಿತವನ್ನು ತಿರಸ್ಕರಿಸಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ” ಎಂದು ಜೆಡಿಎಸ್ ಟೀಕಿಸಿದೆ.

ಪ್ರತಿ ಬಾರಿ ಚುನಾವಣೆಯಲ್ಲಿ ಸೋಲಾದಾಗ ಇವಿಎಂ ಯಂತ್ರಗಳನ್ನು ದೂರುತ್ತಿದ್ದ ಕಾಂಗ್ರೆಸ್‌ಗೆ, ಮತಪತ್ರಗಳ ಮೂಲಕ ನಡೆದ ಈ ಚುನಾವಣೆಯ ಫಲಿತಾಂಶದ ಬಗ್ಗೆ ಏನು ಹೇಳಲು ಸಾಧ್ಯ ಎಂದು ಪ್ರಶ್ನಿಸಿರುವ ಜೆಡಿಎಸ್, “ಈಗ ‘ಬ್ಯಾಲೆಟ್ ಪೇಪರ್ ಕಳವು’ ಎಂದು ಹೇಳುವಿರಾ?” ಎಂದು ವ್ಯಂಗ್ಯವಾಡಿದೆ.