ಜಿಯೋ ಪ್ಲಾಟ್‌ಫಾರ್ಮ್ಸ್ IPO ಧಮಾಕಾ! ಆಂಕರ್ ಬುಕ್‌ನಲ್ಲಿ ದಾಖಲೆಯ ₹2.5 ಲಕ್ಷ ಕೋಟಿ ಬಿಡ್ | Jio Platforms IPO

Jio Platforms IPO Bonanza Record ₹2.5 lakh crore bids in the anchor book

ನವದೆಹಲಿ: ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ  ತರಲು ಸಜ್ಜಾಗಿರುವ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಪ್ಲಾಟ್‌ಫಾರ್ಮ್ಸ್(Jio Platforms IPO)  ಸಾರ್ವಜನಿಕ ಚಂದಾದಾರಿಕೆಗೆ ಬಾಗಿಲು ತೆರೆಯುವ ಮುನ್ನವೇ ಜಿಯೋ ಐಪಿಓ(Jio IPO) ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆದಿದೆ!

ಸಾರ್ವಜನಿಕರಿಗೆ ಈ ಐಪಿಒ ಬುಧವಾರದಿಂದ (ಅಕ್ಟೋಬರ್ 21) ಲಭ್ಯವಾಗಲಿದ್ದು, ಅದಕ್ಕೂ ಮುನ್ನ ಸಂಸ್ಥೆಯ ಆಂಕರ್ ಬುಕ್‌ಗೆ ಸಾಂಸ್ಥಿಕ ಹೂಡಿಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಭ್ಯವಿದ್ದ ಷೇರುಗಳಿಗಿಂತ 30 ಪಟ್ಟು ಹೆಚ್ಚು, ಅಂದರೆ ಬರೋಬ್ಬರಿ ₹2.5 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಬಿಡ್‌ಗಳು ಹರಿದುಬಂದಿವೆ! ಈಗ ಪ್ರಮುಖ ವಿವರಗಳು ಮತ್ತು ಹಂಚಿಕೆಯನ್ನು ನೋಡೋಣ.

ಆಂಕರ್ ಹೂಡಿಕೆದಾರರಿಗೆ ಹಂಚಿಕೆ: ಜಿಯೋ ಪ್ಲಾಟ್‌ಫಾರ್ಮ್ಸ್ ಒಟ್ಟು 212 ಪ್ರಮುಖ ಆಂಕರ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ ₹1,119 ರಂತೆ (ಪ್ರೈಸ್ ಬ್ಯಾಂಡ್‌ನ ಗರಿಷ್ಠ ಬೆಲೆ) 7.24 ಕೋಟಿ ಷೇರುಗಳನ್ನು ಹಂಚಿಕೆ ಮಾಡಿದ್ದು, ಇದರಿಂದ ₹8,110 ಕೋಟಿ ಸಂಗ್ರಹಿಸಿದೆ.

ಎಲ್‌ಐಸಿ (LIC) ಸಿಂಹಪಾಲು: ಭಾರತೀಯ ಜೀವ ವಿಮಾ ನಿಗಮ (LIC) ಅತ್ಯಂತ ಗರಿಷ್ಠ ಅಂದರೆ ₹499.98 ಕೋಟಿ (ಶೇ. 6.17) ಮೌಲ್ಯದ ಷೇರುಗಳನ್ನು ತನ್ನದಾಗಿಸಿಕೊಂಡಿದೆ.

ಇತರ ಪ್ರಮುಖ ಆಂಕರ್ ಹೂಡಿಕೆದಾರರು:

1. ನ್ಯೂ ವರ್ಲ್ಡ್ ಫಂಡ್: ₹486.27 ಕೋಟಿ
2. ಸಿಂಗಾಪುರ ಸರ್ಕಾರ: ₹340.93 ಕೋಟಿ
3. ಎಸ್‌ಬಿಐ ಫೋಕಸ್ಡ್ ಫಂಡ್: ₹315 ಕೋಟಿ
4. ಬಿಎನ್‌ಪಿ ಪಾರಿಬಾಸ್: ₹303.25 ಕೋಟಿ

ದೇಶೀಯ ಫಂಡ್‌ಗಳ ಹವಾ:

ಭಾರತದ ಮ್ಯೂಚುವಲ್ ಫಂಡ್‌ಗಳು 25 ಫಂಡ್ ಹೌಸ್‌ಗಳ 95 ಸ್ಕೀಮ್‌ಗಳ ಮೂಲಕ ₹2,784.96 ಕೋಟಿ (ಶೇ. 34.34) ಮೌಲ್ಯದ ಷೇರು ಪಡೆದುಕೊಂಡಿವೆ. ವಿಮಾ ಕಂಪನಿಗಳು ಮತ್ತು ಪಿಂಚಣಿ ನಿಧಿಗಳು ₹1,089.95 ಕೋಟಿ (ಶೇ. 13.44) ಮೌಲ್ಯದ ಷೇರುಗಳನ್ನು ಪಡೆದಿವೆ.

ಜಾಗತಿಕ ದಿಗ್ಗಜ ಹೂಡಿಕೆದಾರರಿಂದ ಬೇಡಿಕೆ:

ಬ್ಲ್ಯಾಕ್‌ರಾಕ್ (BlackRock), ಕ್ಯಾಪಿಟಲ್ ಗ್ರೂಪ್, ಫಿಡೆಲಿಟಿ, ಟಿ. ರೋ ಪ್ರೈಸ್, ಶ್ರೋಡರ್ಸ್, ಜೆಪಿ ಮಾರ್ಗನ್, ಫ್ರಾಂಕ್ಲಿನ್ ಟೆಂಪಲ್ಟನ್, ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ ಮತ್ತು ಸಿಂಗಾಪುರದ ಮಾನಿಟರಿ ಅಥಾರಿಟಿಯಂತಹ ಜಾಗತಿಕ ದೈತ್ಯ ಹೂಡಿಕೆ ಸಂಸ್ಥೆಗಳು ಜಿಯೋದ ಷೇರುಗಳನ್ನು ಗಿಟ್ಟಿಸಿಕೊಳ್ಳಲು ಸಾಲಿನಲ್ಲಿ ನಿಂತಿದ್ದವು. ಕೆಲವು ಬೃಹತ್ ಸಂಸ್ಥೆಗಳಂತೂ ತಲಾ 750 ಮಿಲಿಯನ್‌ನಿಂದ 1 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯಕ್ಕೆ ಬಿಡ್ ಸಲ್ಲಿಸಿದ್ದವು!

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಮುಖ್ಯಾಂಶಗಳು:

ಐಪಿಒ ದಿನಾಂಕ: ಅಕ್ಟೋಬರ್ 21 ರಿಂದ ಅಕ್ಟೋಬರ್ 23, 2026
ಒಟ್ಟು ಸಂಗ್ರಹದ ಗುರಿ: ₹30,213 ಕೋಟಿ (27 ಕೋಟಿ ಹೊಸ ಷೇರುಗಳು)
ಪ್ರೈಸ್ ಬ್ಯಾಂಡ್: ಪ್ರತಿ ಷೇರಿಗೆ ₹1,065 ರಿಂದ ₹1,119
ಸಂಸ್ಥೆಯ ಒಟ್ಟು ಮೌಲ್ಯ: ಸುಮಾರು 108 ಬಿಲಿಯನ್ ಅಮೆರಿಕನ್ ಡಾಲರ್

ಬಳಕೆ ಹೇಗೆ?  

ಸಂಗ್ರಹಿಸಿದ ಹಣದಲ್ಲಿ ಒಂದಷ್ಟು ಭಾಗವನ್ನು ಜಿಯೋ ಟೆಲಿಕಾಂ ಸಂಸ್ಥೆಯ ಸಾಲ ತೀರಿಸಲು ಮತ್ತು ಉಳಿದದ್ದನ್ನು ಕಂಪನಿಯ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು.

ಜಿಯೋ ಪ್ಲಾಟ್‌ ಫಾರ್ಮ್ಸ್ ಜೂನ್ 2026ರ ವೇಳೆಗೆ  53.33 ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಭಾರತದ ಒಟ್ಟು ಡೇಟಾ ಟ್ರಾಫಿಕ್‌ನಲ್ಲಿ ಶೇ. 60 ರಷ್ಟನ್ನು ತಾನೊಬ್ಬನೇ ನಿರ್ವಹಿಸುತ್ತಿದೆ. ಆಂಕರ್ ಹೂಡಿಕೆದಾರರಿಂದ ಭಾರಿ ಬೇಡಿಕೆ ಬಂದ ತಕ್ಷಣ ಚಿಲ್ಲರೆ ಹೂಡಿಕೆದಾರರಿಗೂ ಶೇ. 100 ರಷ್ಟು ಲಾಭ ಸಿಗುತ್ತದೆ ಎಂದು ಖಾತರಿ ನೀಡಲಾಗುವುದಿಲ್ಲ. ಆದರೆ, ಸಾಂಸ್ಥಿಕ ಹೂಡಿಕೆದಾರರ ಈ ಅಭೂತಪೂರ್ವ ಆಸಕ್ತಿಯು ಭಾರತೀಯ ಷೇರು ಮಾರುಕಟ್ಟೆಯ ತಾಕತ್ತು ಹಾಗೂ ಜಿಯೋದ ಭವಿಷ್ಯದ ಮೇಲಿರುವ ಅಪಾರ ನಂಬಿಕೆಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.