ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ ಓಎಂಆರ್ ಶೀಟ್ ವೆಬ್ ಸೈಟ್ ಗೆ ಅಪ್‌ಲೋಡ್ ಮಾಡಿದ ಕೆಇಎ

ಬೆಂಗಳೂರು: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ಹುದ್ದೆಗಳ ನೇಮಕಾತಿಗೆ ಶುಕ್ರವಾರ ನಡೆದ ಲಿಖಿತ ಪರೀಕ್ಷೆ ಬಳಿಕ ಒಂದು ಗಂಟೆಯಲ್ಲೇ ಎಲ್ಲ ಓಎಂಆರ್ ಶೀಟ್ ಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.

ಬೆಂಗಳೂರಿನ ಎರಡು ಮತ್ತು ಧಾರವಾಡದ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಮುಗಿದ ಕ್ಷಣದಿಂದಲೇ ಓಎಂಆರ್ ಶೀಟ್ ಗಳನ್ನು ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಸೆಷನ್ಸ್ ನಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷೆ ಮುಗಿದ ಕೂಡಲೇ ಓಎಂಆರ್ ಉತ್ತರ ಪತ್ರಿಕೆಗಳನ್ನು ತಂದು ಸ್ಕ್ಯಾನ್ ಮಾಡಲಾಯಿತು. ನಂತರ ಅವುಗಳನ್ನು ಪರಿಶೀಲಿಸಿ, ಪರೀಕ್ಷಾ ಕೇಂದ್ರವಾರು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದು, ಯಾರು ಬೇಕಾದರೂ‌ ನೋಡಿಕೊಳ್ಳಬಹುದು. ಇದು ಕೆಇಎ ಅಳವಡಿಸಿಕೊಂಡಿರುವ ಪಾರದರ್ಶಕವಾದ ಕ್ರಮ ಎಂದು ಅವರು ಹೇಳಿದ್ದಾರೆ.