ಕೆಸೆಟ್-25: ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳ ಹೊಸ ಪಟ್ಟಿ ಪ್ರಕಟ

ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2025ಕ್ಕೆ (ಕೆಸೆಟ್-25) ಸಂಬಂಧಿಸಿದಂತೆ ಸಾಕಷ್ಟು ಅವಕಾಶಗಳ ನಂತರವೂ ಮೂಲ ದಾಖಲೆಗಳ ಪರಿಶೀಲನೆ ವೇಳೆ ಒಳಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸದ ಹಾಗೂ ಒಳಮೀಸಲಾತಿಯನ್ನು ತಪ್ಪಾಗಿ ನಮೂದಿಸಿರುವ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಿಂದ ಕೈಬಿಟ್ಟು, ಲಭ್ಯ ಖಾಲಿ ಸ್ಥಾನಗಳಿಗೆ ಯುಜಿಸಿ ನಿಯಮಾನುಸಾರ ಅರ್ಹ ಅಭ್ಯರ್ಥಿಗಳನ್ನು ಪರಿಗಣಿಸಿ ಹೊಸ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಪ್ರಕಟಿಸಿದೆ.

ಅರ್ಹತಾ ಪಟ್ಟಿಯಿಂದ ಕೈಬಿಡಲಾಗಿರುವ ವಿಷಯವಾರು ಮತ್ತು ಪ್ರವರ್ಗವಾರು ಪಟ್ಟಿಯನ್ನು ಅನುಬಂಧ-1 ಹಾಗೂ ಅನುಬಂಧ-2 ರಲ್ಲಿ ಪ್ರಕಟಿಸಲಾಗಿದೆ. ಹೊಸದಾಗಿ ಅರ್ಹರಾಗುವ ವಿಷಯವಾರು ಮತ್ತು ಪ್ರವರ್ಗವಾರು ಅಭ್ಯರ್ಥಿಗಳು ಪಟ್ಟಿಯನ್ನು ಅನುಬಂಧ-3ರಲ್ಲಿ ಪ್ರಕಟಿಸಲಾಗಿದೆ. ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಈ ವಿವರ ತಿಳಿಯಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹದ ನಿರ್ದೇಶಕ ಎಚ್.ಪ್ರಸನ್ನ ಬುಧವಾರ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.

SC-A, SC-B, SC-C ಒಳ ಮೀಸಲಾತಿಯ ಅರ್ಹ ಅಭ್ಯರ್ಥಿಗಳ ಹೊರತುಪಡಿಸಿ ಉಳಿದಂತೆ ನವೆಂಬರ್ 21ರಂದು ಪ್ರಕಟಿಸಲಾದ ವಿಷಯವಾರು/ಪ್ರವರ್ಗವಾರು ಅರ್ಹತಾ ಪಟ್ಟಿಯಲ್ಲಿ ಯಾವ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.