ವಿಕಲಚೇತನರ ಬೇಡಿಕೆ ಈಡೇರಿಸಲು ಸರ್ಕಾರದ ಬಳಿ ಹಣವಿಲ್ಲವೇ?: ಕುಮಾರಸ್ವಾಮಿ

ಬೆಂಗಳೂರು: ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ರಾಮನಗರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಪಾದಯಾತ್ರೆ ನಡೆಸುತ್ತಿರುವ ವಿಕಲಚೇತನರಿಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ. ಬೆಂಗಳೂರು–ಮೈಸೂರು ಹೆದ್ದಾರಿಯ ಕಣಮಣಿಕೆ ಬಳಿ ಪ್ರತಿಭಟನಾಕಾರರನ್ನು ಭೇಟಿಯಾಗಿ, ಅವರ ಸಮಸ್ಯೆಗಳನ್ನು ಆಲಿಸಿದರು.

ವಿಧಾನಸಭೆಯ ಪ್ರತಿಪಕ್ಷ ನಾಯಕರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ತೆರಳಿದ ಕುಮಾರಸ್ವಾಮಿ, ವಿಕಲಚೇತನರೊಂದಿಗೆ ಚರ್ಚೆ ನಡೆಸಿದರು. ಪಾದಯಾತ್ರೆಯನ್ನು ತಡೆದಿದ್ದ ಪೊಲೀಸರೊಂದಿಗೂ ಮಾತುಕತೆ ನಡೆಸಿ, ಮರುದಿನ ಬೆಳಗ್ಗೆಯಿಂದ ಪಾದಯಾತ್ರೆ ಮುಂದುವರಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪೊಲೀಸರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ವಿಕಲಚೇತನರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

“ನಾನು ಮುಖ್ಯಮಂತ್ರಿಯಾಗಿದ್ದಾಗ ವಿಕಲಚೇತನರು ಮುಖ್ಯಮಂತ್ರಿ ಕಚೇರಿ, ನಿವಾಸ ಹಾಗೂ ವಿಧಾನಸೌಧಕ್ಕೆ ಮುಕ್ತವಾಗಿ ಬರುವ ವ್ಯವಸ್ಥೆ ಇತ್ತು. ಆದರೆ, ಕಾಂಗ್ರೆಸ್ ಆಡಳಿತದಲ್ಲಿ ಅವರನ್ನು ಫ್ರೀಡಂ ಪಾರ್ಕ್‌ವರೆಗೂ ಹೋಗಲು ಬಿಡುತ್ತಿಲ್ಲ” ಎಂದು ಟೀಕಿಸಿದರು.

ಸರ್ಕಾರವು ಅನಗತ್ಯ ಉದ್ದೇಶಗಳಿಗೆ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಆರೋಪಿಸಿದ ಕುಮಾರಸ್ವಾಮಿ, ವಿವಿಧ ಸಮಿತಿಗಳು ಮತ್ತು ಯೋಜನೆಗಳಿಗೆ ಹಣ ಒದಗಿಸುವ ಸರ್ಕಾರಕ್ಕೆ ವಿಕಲಚೇತನರ ಬೇಡಿಕೆಗಳನ್ನು ಈಡೇರಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

“ವಿವಿಧ ಉದ್ದೇಶಗಳಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಲು ಸರ್ಕಾರದ ಬಳಿ ಹಣವಿದೆ. ಆದರೆ, ವಿಕಲಚೇತನರ ಬೇಡಿಕೆ ಈಡೇರಿಸಲು ಹಾಗೂ ಅವರ ಮಾಶಾಸನ ನೀಡಲು ಹಣವಿಲ್ಲವೇ?” ಎಂದು ಅವರು ವಾಗ್ದಾಳಿ ನಡೆಸಿದರು.

ವಿಕಲಚೇತನರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ, ಅವರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.