ಮರು ಜಾತಿ ಗಣತಿ ನಿರ್ಧಾರಕ್ಕೆ ಶಾಸಕ ದಿನೇಶ್ ಗೂಳಿಗೌಡ ಸ್ವಾಗತ

ಬೆಂಗಳೂರು: ಮರು ಜಾತಿ ಗಣತಿ ಮಾಡಲು ಮುಂದಾಗಿರುವ ಸರ್ಕಾರದ ನಿರ್ಣಯವನ್ನು ಸ್ವಾಗತಿಸುತ್ತೇನೆ ಎಂದು ವಿಧಾನ ಪರಿಷತ್‌ ಶಾಸಕ ದಿನೇಶ ಗೂಳಿಗೌಡ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮರು ಜಾತಿ ಗಣತಿ ನಿರ್ಣಯಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗ ಈ ಹಿಂದೆ ನಡೆಸಿದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಯನ್ನು ಸರ್ಕಾರ ತಾತ್ವಿಕವಾಗಿ ಒಪ್ಪುತ್ತದೆ ಎಂದು ಹೇಳಿತ್ತು. ಆದರೆ, ಆ ಗಣತಿಯ ಬಗ್ಗೆ ಮಠಾಧೀಶರು, ಧಾರ್ಮಿಕ ಮುಖಂಡರು, ವಿವಿಧ ಸಂಘಟನೆಗಳು, ಪ್ರಮುಖ ಜಾತಿ ಸಂಘಟನೆಗಳು ಮರು ಗಣತಿಗೆ ಒತ್ತಾಯಿಸಿದ್ದರು. ಈ ಹಿಂದೆ ಮಾಡಿದ ಜಾತಿ ಗಣತಿಯಲ್ಲಿ ಹಲವು ಗೊಂದಲಗಳಿವೆ ಎಂದು ಆಕ್ಷೇಪಿಸಿದ್ದವು. ಸರ್ಕಾರಕ್ಕೆ ಮನವಿ ಸಲ್ಲಿಸಿ ಮರು ಸಮೀಕ್ಷೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ಸೂಚನೆಯಂತೆ ಸರ್ಕಾರ ಮರು ಸಮೀಕ್ಷೆ ನಿರ್ಣಯ ಪ್ರಕಟಿಸಿರುವುದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ.

ಈ ಸಮೀಕ್ಷೆ ನಿಗದಿತ ಕಾಲಾವಧಿಯಲ್ಲಿ ಮುಗಿಯಬೇಕು, ಗೊಂದಲಗಳು ಬಗೆಹರಿಯಬೇಕು ಎಂಬುದು ನಮ್ಮ ಸದಾಶಯ ಎಂದು ದಿನೇಶ್ ಗೂಳಿಗೌಡ ಹೇಳಿದ್ದಾರೆ.