ಬೆಂಗಳೂರಲ್ಲಿ ಭ್ರಷ್ಟರ ಬೇಟೆಗೆ ಇಳಿದ ಲೋಕಾಯುಕ್ತ: ಅಬಕಾರಿ ಡಿಸಿ ಕಚೇರಿಗಳ ಮೇಲೆ ದಾಳಿ

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಲೋಕಾಯುಕ್ತ ಪೊಲೀಸರು ಇಂದು ಬೃಹತ್ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಒಟ್ಟು ಒಂಬತ್ತು ಅಬಕಾರಿ ಉಪ ಆಯುಕ್ತರ (ಡಿಸಿ) ಕಚೇರಿಗಳ ಮೇಲೆ ಏಕಕಾಲದಲ್ಲಿ ಹಠಾತ್ ದಾಳಿ ನಡೆಸಿ ಶಾಕ್ ನೀಡಿದ್ದಾರೆ.

ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ನೇರ ಉಸ್ತುವಾರಿಯಲ್ಲಿ ಈ ಹಠಾತ್ ದಾಳಿ ನಡೆದಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬರುವ 8 ಪ್ರಮುಖ ಡಿಸಿ ಕಚೇರಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಡಿಸಿ ಕಚೇರಿಯನ್ನು ಗುರಿಯಾಗಿಸಿಕೊಂಡು ಅಧಿಕಾರಿಗಳ ತಂಡ ಕಚೇರಿಗಳ ಒಳಗೆ ಪ್ರವೇಶಿಸಿದೆ. ದಾಳಿಯ ವೇಳೆ ಸಾರ್ವಜನಿಕರಿಂದ ಬಂದಿದ್ದ ದೂರುಗಳು, ಪರವಾನಗಿ ನವೀಕರಣದ ಕಡತಗಳು ಹಾಗೂ ಕಚೇರಿಯಲ್ಲಿದ್ದ ನಗದು ಮತ್ತು ಪ್ರಮುಖ ದಾಖಲೆ ಪತ್ರಗಳ ತಪಾಸಣೆ ನಡೆಸಲಾಗುತ್ತಿದೆ.

ಬೆಳ್ಳಂಬೆಳಗ್ಗೆಯೇ ಏಕಕಾಲಕ್ಕೆ ಹಿರಿಯ ಅಧಿಕಾರಿಗಳ ಕಚೇರಿಗಳ ಮೇಲೆ ದಾಳಿ ನಡೆಸಿರುವುದರಿಂದ ಇಲಾಖೆಯ ಸಿಬ್ಬಂದಿ ಹಾಗೂ ಮಧ್ಯವರ್ತಿಗಳಲ್ಲಿ ತಲ್ಲಣ ಸೃಷ್ಟಿಯಾಗಿದೆ. ಲೋಕಾಯುಕ್ತ ಅಧಿಕಾರಿಗಳ ಈ ಜಂಟಿ ಶೋಧ ಕಾರ್ಯ ಸದ್ಯ ಮುಂದುವರಿದಿದ್ದು, ಕಾರ್ಯಾಚರಣೆಯ ಅಂತ್ಯಕ್ಕೆ ಕಚೇರಿಗಳಲ್ಲಿ ಸಿಕ್ಕಿರುವ ಅಕ್ರಮ ಹಣ ಹಾಗೂ ಕಡತಗಳ ಸಂಪೂರ್ಣ ವಿವರ ಲಭ್ಯವಾಗಲಿದೆ.