ಬೆಂಗಳೂರು: ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉಂಟಾಗುತ್ತಿರುವ ತೀವ್ರ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು ₹436 ಕೋಟಿ ವೆಚ್ಚದ ಬೃಹತ್ ಸಂಚಾರ ಮೂಲಸೌಕರ್ಯ ಯೋಜನೆಗೆ ಮಂಗಳವಾರ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(CM DK Shivakumar)ಅವರು ಈ ಮಹತ್ವಾಕಾಂಕ್ಷಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಆ ಮೂಲಕ ಸಚಿವ ಕೆಜೆ ಜಾರ್ಜ್(Minister KJ George) ಅವರ ಕ್ಷೇತ್ರಕ್ಕೆ ಸಿಎಂ ಡಿ.ಕೆ ಶಿವಕುಮಾರ್(CM DK Shivakumar)ಭರ್ಜರಿ ಕೊಡುಗೆ ನೀಡಿದ್ದಾರೆ.
ಈ ಯೋಜನೆಯ ಪ್ರಮುಖ ಆಕರ್ಷಣೆಯಾಗಿ ಮಾರುತಿ ಸೇವಾನಗರ ಮುಖ್ಯರಸ್ತೆಯ ಐಒಸಿ ಜಂಕ್ಷನ್ನಲ್ಲಿ ಬೆಂಗಳೂರಿನ ಪ್ರಪ್ರಥಮ ಎಲಿವೇಟೆಡ್ ವೃತ್ತಾಕಾರದ ರೋಟರಿ ಫ್ಲೈಓವರ್ ತಲೆ ಎತ್ತಲಿದೆ. ಇದರೊಂದಿಗೆ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಹೆಚ್ಚುವರಿಯಾಗಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆಯನ್ನೂ ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಯುವ ಕಾಂಗ್ರೆಸ್ ಮುಖಂಡ ರಾಣಾ ಜಾರ್ಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾಮಗಾರಿಯ ನೀಲನಕ್ಷೆ ಪರಿಶೀಲಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಐಒಸಿ ಜಂಕ್ಷನ್ನ ಟ್ರಾಫಿಕ್ ಸಮಸ್ಯೆ ಬಗೆಹರಿಸುವಂತೆ ಸಚಿವ ಕೆ.ಜೆ. ಜಾರ್ಜ್ ಅವರು ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಸ್ಮರಿಸಿದರು. “ಈ ಜಂಕ್ಷನ್ನ ದಟ್ಟಣೆ ಕುರಿತು ಕೆ.ಜೆ. ಜಾರ್ಜ್ ಸುಮಾರು 20 ಬಾರಿ ನನ್ನೊಂದಿಗೆ ಚರ್ಚಿಸಿ, ಬೃಹತ್ ಯೋಜನೆಯ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು. ಇಂದು ಆ ಕನಸಿಗೆ ಚಾಲನೆ ಸಿಕ್ಕಿದೆ. ಸಾರ್ವಜನಿಕರ ಅಮೂಲ್ಯ ಸಮಯವನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದ್ದು, ಗುಣಮಟ್ಟದ ಮೂಲಸೌಕರ್ಯ ಒದಗಿಸುವಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಭರವಸೆ ನೀಡಿದರು.
ಮುಂದಿನ 25 ವರ್ಷಗಳ ದೂರದೃಷ್ಟಿಯ ಯೋಜನೆ
ಮುಂದಿನ ಎರಡೂವರೆ ದಶಕಗಳ ವಾಹನ ದಟ್ಟಣೆಯ ಅಂದಾಜಿನ ಮೇಲೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಸ್ಟೀಲ್ ಬಾಕ್ಸ್ ಗರ್ಡರ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವ ಈ ನಾಲ್ಕು ಪಥದ ಎಲಿವೇಟೆಡ್ ರೋಟರಿ ಫ್ಲೈಓವರ್, ಪ್ರತಿ ಗಂಟೆಗೆ ಸುಮಾರು 4,100 ವಾಹನಗಳ (PCUs) ಸಂಚಾರವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿದೆ. ಬಾಣಸವಾಡಿ ರಸ್ತೆ, ಕಮ್ಮನಹಳ್ಳಿ ರಸ್ತೆ, ಮಾರುತಿ ಸೇವಾನಗರ ಹಾಗೂ ಹಳೆ ಮದ್ರಾಸ್ ರಸ್ತೆ–ಇಂದಿರಾನಗರ–ಬೈಯಪ್ಪನಹಳ್ಳಿ ಟರ್ಮಿನಲ್ ಕಡೆಗೆ ಸಂಚರಿಸಲು ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ರ್ಯಾಂಪ್ಗಳನ್ನು ನಿರ್ಮಿಸಲಾಗುತ್ತಿದ್ದು, ಇದರಿಂದ ವಾಹನ ಸವಾರರು ಸಿಗ್ನಲ್ಗಳಲ್ಲಿ ಕಾಯದೆ ಸುಗಮವಾಗಿ ಸಾಗಬಹುದಾಗಿದೆ.
ಬೈಯಪ್ಪನಹಳ್ಳಿಯಲ್ಲಿ ನೂತನ ಮೇಲ್ಸೇತುವೆ ಮತ್ತು ಅಂಡರ್ಪಾಸ್
ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ (ಸಂಖ್ಯೆ 136A) ಬಳಿ ರೈಲು ಸಂಚಾರದ ಸಮಯದಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು, ಪ್ರಸ್ತುತ ಇರುವ ಎರಡು ಪಥದ ಮೇಲ್ಸೇತುವೆಗೆ ಪೂರಕವಾಗಿ ಹೊಸದಾಗಿ ನಾಲ್ಕು ಪಥದ ರೈಲ್ವೆ ಮೇಲ್ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆ, ಸರ್ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ಗೆ ತೆರಳುವ ಪ್ರಯಾಣಿಕರು ಮತ್ತು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕಾಗಿ ರೈಲ್ವೆ ಹಳಿಗಳ ಕೆಳಭಾಗದಲ್ಲಿ ಪಾದಚಾರಿ ಅಂಡರ್ಪಾಸ್ ಕೂಡ ನಿರ್ಮಾಣವಾಗಲಿದೆ.
ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ಸಂಸ್ಥೆಯು ಇಪಿಸಿ (EPC) ಮಾದರಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಮುಂದಿನ 24 ತಿಂಗಳ ಒಳಗಾಗಿ ಸಂಪೂರ್ಣ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ರೋಟರಿ ಫ್ಲೈಓವರ್, ರೈಲ್ವೆ ಮೇಲ್ಸೇತುವೆ, ಸಂಪರ್ಕ ರಸ್ತೆಗಳು, ಸರ್ವಿಸ್ ರಸ್ತೆಗಳು ಹಾಗೂ ಪಾದಚಾರಿ ಸಬ್ವೇ ಕಾಮಗಾರಿಗಳು ಸೇರಿವೆ.
ಯೋಜನೆಗೆ ಚಾಲನೆ ದೊರೆತಿರುವ ಕುರಿತು ಸಂತಸ ವ್ಯಕ್ತಪಡಿಸಿದ ಸಚಿವ ಕೆ.ಜೆ. ಜಾರ್ಜ್, ಈ ಕಾಮಗಾರಿಯು ಕೇವಲ ಸರ್ವಜ್ಞನಗರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಟರ್ಮಿನಲ್ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿ ಲಕ್ಷಾಂತರ ಪ್ರಯಾಣಿಕರಿಗೆ ವರದಾನವಾಗಲಿದೆ ಎಂದರು.
“ನಗರದ ಸಂಚಾರ ಸಮಸ್ಯೆಗಳಿಗೆ ವೈಜ್ಞಾನಿಕ ಹಾಗೂ ದೀರ್ಘಕಾಲೀನ ಪರಿಹಾರ ಕಂಡುಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಮೂಲಸೌಕರ್ಯಗಳನ್ನು ಬಲಪಡಿಸುವ ಮೂಲಕ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವುದೇ ಸರ್ಕಾರದ ಮುಖ್ಯ ಗುರಿಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.




