BREAKING: ಸಾಗರದಲ್ಲಿ ತಹಶೀಲ್ದಾರ ಡಾ.ಪ್ರತಿಭಾ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ: 330 ಗ್ರಾಂ ಗಾಂಜಾ ಜಪ್ತಿ, ಇಬ್ಬರು ಅರೆಸ್ಟ್

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿರುವ ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರ ನೇತೃತ್ವದ ತಂಡವು, ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗಾಂಜಾವನ್ನು ಪೊಲೀಸರ ನೆರವಿನೊಂದಿಗೆ ಯಶಸ್ವಿಯಾಗಿ ವಶಪಡಿಸಿಕೊಂಡಿದೆ.

​ಖಚಿತ ಮಾಹಿತಿ ಮೇರೆಗೆ ದಾಳಿ

​ಸಾಗರ ತಾಲೂಕಿನ ಅರಳಿಕೊಪ್ಪ ಪ್ರದೇಶದಲ್ಲಿ ಕಾರೊಂದರಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪುಲ್ಲಯ್ಯ ರಾಥೋಡ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಜಂಟಿ ಕಾರ್ಯಾಚರಣೆ ನಡೆಸಿತು. ದಾಳಿಯ ವೇಳೆ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ 330 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ.

​ಇಬ್ಬರ ಬಂಧನ, ಕಾರ್ ವಶ

​ಅಕ್ರಮ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಲಾದ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

​ಕಿಂಗ್ ಪಿನ್ ಪತ್ತೆ ಹಚ್ಚಲು ಸಾಗರ ತಹಶೀಲ್ದಾರ್ ಡಾ.ಪ್ರತಿಭಾ ಕಟ್ಟುನಿಟ್ಟಿನ ಸೂಚನೆ

​ಕಾರ್ಯಾಚರಣೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಾ.ಪ್ರತಿಭಾ ಅವರು., “ಸಾಗರ ತಾಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ದಂಧೆಯ ಕೇವಲ ಮೇಲ್ಮಟ್ಟದ ವ್ಯಕ್ತಿಗಳನ್ನಷ್ಟೇ ಅಲ್ಲದೆ, ಇದರ ಹಿಂದಿರುವ ಅಸಲಿ ‘ಕಿಂಗ್ ಪಿನ್’ ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಈ ದಂಧೆಯ ಮೂಲವನ್ನು ಹುಡುಕಿ, ಜಾಲವನ್ನು ಮಟ್ಟಹಾಕುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಮ್ಮ ಸಾಗರ ತಾಲೂಕಿನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ಸಹಿಸುವುದಿಲ್ಲ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಅನಿವಾರ್ಯ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮ ಆಡಳಿತಾಧಿಕಾರಿಗಳಾದ ಸಂತೋಷ್ ಮತ್ತು ಸಮೇದ್ ಉಪಸ್ಥಿತರಿದ್ದರು.

ವರದಿ: ವಸಂತ ಬಿ ಈಶ್ವರಗೆರೆ, ಪ್ರಧಾನ ಸಂಪಾದಕರು..