ಬೆಂಗಳೂರು: ರಾಜಧಾನಿಯ ಪರಿಸರ ಪರೀಕ್ಷಾ ಪ್ರಯೋಗಾಲಯವೊಂದರಲ್ಲಿ ನಡೆಯುತ್ತಿದ್ದ ನಕಲಿ ವರದಿ ಸೃಷ್ಟಿ ಹಾಗೂ ಪರಿಸರ ಮಾಲಿನ್ಯ ನಿಯಮಾವಳಿಗಳ ಸಾರಾಸಗಟು ಉಲ್ಲಂಘನೆಯ ಕರಾಳ ದಂಧೆಯನ್ನು ರಾಜ್ಯ ಸರ್ಕಾರ ಬಯಲಿಗೆಳೆದಿದೆ.
ನಗರದ ‘ಬೆಂಗಳೂರು ಅನಲಿಟಿಕ್ಸ್ ಆ್ಯಂಡ್ ರಿಸರ್ಚ್ ಲ್ಯಾಬೋರೇಟರಿ ಪ್ರೈವೇಟ್ ಲಿಮಿಟೆಡ್’ ಘಟಕದ ಮೇಲೆ ಅರಣ್ಯ, ಪರಿಸರ ಮತ್ತು ಜೀವಪರಿಸ್ಥಿತಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಹಿರಿಯ ಅಧಿಕಾರಿಗಳೊಂದಿಗೆ ದಿಢೀರ್ ದಾಳಿ ನಡೆಸಿ, ಸಂಸ್ಥೆಯ ಕಳ್ಳಾಟವನ್ನು ಪತ್ತೆಹಚ್ಚಿದ್ದಾರೆ.
ಅನುಮತಿಯೂ ಇಲ್ಲ, ಸಿಬ್ಬಂದಿಯೂ ಇಲ್ಲ: ಕಾಗದದಲ್ಲಷ್ಟೇ ಲ್ಯಾಬ್ ಕಾರ್ಯಾಚರಣೆ
ಕೇಂದ್ರ ಪರಿಸರ ಸಚಿವಾಲಯಕ್ಕೆ (MoEF) ತಪ್ಪು ಮಾಹಿತಿ ನೀಡಿ, ಮೂವರು ತಜ್ಞ ವಿಶ್ಲೇಷಕರಿದ್ದಾರೆಂದು ನಂಬಿಸಿ ಈ ಪ್ರಯೋಗಾಲಯವು ಆರಂಭಿಕ ಅನುಮತಿ ಗಿಟ್ಟಿಸಿಕೊಂಡಿತ್ತು. ಆದರೆ ವಾಸ್ತವದಲ್ಲಿ ಸಚಿವರು ಪರಿಶೀಲನೆ ನಡೆಸಿದ ವೇಳೆ ಕೇವಲ ಒಬ್ಬರೇ ವಿಶ್ಲೇಷಕರು ಹಾಜರಿದ್ದು, ಉಳಿದಿಬ್ಬರು ಅರ್ಧ ವರ್ಷದಿಂದ ಕಚೇರಿ ಮುಖವನ್ನೇ ನೋಡಿಲ್ಲ ಎಂಬ ಅಂಶ ಬಹಿರಂಗವಾಗಿದೆ. ಮತ್ತೊಂದೆಡೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೀಡಿದ್ದ ಅಧಿಕೃತ ಕಾರ್ಯಾಚರಣೆ ಅನುಮತಿ ಪತ್ರದ ಅವಧಿಯು 2025ರಲ್ಲೇ ಮುಗಿದುಹೋಗಿದ್ದರೂ, ಯಾವುದೇ ನವೀಕರಣವಿಲ್ಲದೆ ಅಕ್ರಮವಾಗಿ ಈ ಸಂಸ್ಥೆ ವ್ಯವಹಾರ ಮುಂದುವರಿಸಿತ್ತು.
ಅಪಾಯಕಾರಿ ರಾಸಾಯನಿಕ ಚೆಲ್ಲಾಟ, ಕಣ್ಣೊರೆಸುವ ಪರೀಕ್ಷೆಗಳು
ಪರಿಸರ ರಕ್ಷಣೆಯ ಪಾಠ ಹೇಳಬೇಕಾದ ಪ್ರಯೋಗಾಲಯವೇ ವಿಷಕಾರಿ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ತೆರೆದ ಹಳ್ಳಕ್ಕೆ ಸುರಿಯುತ್ತಿದ್ದುದು ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಇದರೊಂದಿಗೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ದರಪಟ್ಟಿಯನ್ವಯ ಸಾವಿರಾರು ರೂಪಾಯಿ ವೆಚ್ಚ ತಗಲುವ ನೀರಿನ ಶುದ್ಧೀಕರಣ ಘಟಕದ (STP) ಪರೀಕ್ಷೆ ಹಾಗೂ ಕಾರ್ಖಾನೆಗಳ ಹೊಗೆ-ಧೂಳಿನ ತಪಾಸಣೆಯನ್ನು ಕೇವಲ ₹650 ಮತ್ತು ₹1,000ದಂತಹ ಕನಿಷ್ಠ ಮೊತ್ತಕ್ಕೆ ಈ ಸಂಸ್ಥೆ ನಿರ್ವಹಿಸುತ್ತಿತ್ತು. ಯಾವುದೇ ವೈಜ್ಞಾನಿಕ ಪರೀಕ್ಷೆ ನಡೆಸದೆ, ಟೇಬಲ್ ಮೇಲೆ ಕುಳಿತು ಕೃತಕ ವರದಿಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಜತೆಗೆ ಶಬ್ದ ಮಾಲಿನ್ಯ ಅಳತೆಯ ದಾಖಲೆಗಳಲ್ಲೂ ಬೃಹತ್ ತಿರುಚುವಿಕೆ ನಡೆದಿರುವುದು ಪತ್ತೆಯಾಗಿದೆ.
ರಾಜ್ಯಾದ್ಯಂತ ಇರುವ ಎಲ್ಲಾ ಮಾದರಿ ಪರೀಕ್ಷಾ ಕೇಂದ್ರಗಳಿಗೂ ತನಿಖಾ ಬಿಸಿ
ಸಂಸ್ಥೆಯ ವರದಿಗಳ ವಿಶ್ವಾಸಾರ್ಹತೆ ಸಂಪೂರ್ಣ ಸಂಶಯಾಸ್ಪದವಾಗಿರುವ ಹಿನ್ನೆಲೆಯಲ್ಲಿ ಈ ಘಟಕದ ವಿರುದ್ಧ ಪೂರ್ಣ ಪ್ರಮಾಣದ ಕ್ರಿಮಿನಲ್ ತನಿಖೆಗೆ ಸಚಿವರು ಆದೇಶಿಸಿದ್ದಾರೆ. ಕರ್ನಾಟಕದಲ್ಲಿ ವಾಯು, ನೀರು ಹಾಗೂ ಶಬ್ದ ಮಾಲಿನ್ಯದ ಮಾದರಿ ಸಂಗ್ರಹಿಸಿ ವರದಿ ನೀಡುವ ಸುಮಾರು 50 ಖಾಸಗಿ ಪ್ರಯೋಗಾಲಯಗಳಿದ್ದು, ಈ ದಾಳಿಯು ಅಕ್ರಮವೆಸಗುವ ಎಲ್ಲರಿಗೂ ಎಚ್ಚರಿಕೆಯಾಗಿದೆ ಎಂದು ತಿಳಿಸಿದ ಸಚಿವರು, ರಾಜ್ಯದ ಉಳಿದೆಲ್ಲಾ ಘಟಕಗಳನ್ನೂ ಕಟ್ಟುನಿಟ್ಟಿನ ಪರಿಶೀಲನೆಗೆ ಒಳಪಡಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಳಿತ ಮಂಡಳಿಗೆ ಸ್ಪಷ್ಟ ಸೂಚನೆ ರವಾನಿಸಿದ್ದಾರೆ.




