ಬೆಂಗಳೂರು: ರಾಜ್ಯದಲ್ಲಿ ವೈಮಾನಿಕ ಮತ್ತು ಏರೋಸ್ಪೇಸ್ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪ್ರತ್ಯೇಕ ನೂತನ ‘ನಾಗರಿಕ ವಿಮಾನಯಾನ ನೀತಿ’ಗೆ (New Civil Aviation Policy) ಅಂಗೀಕಾರ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ(Minister MB Patila) ಬುಧವಾರ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ವಿಮಾನ ನಿಲ್ದಾಣಗಳು ನಿಷ್ಕ್ರಿಯವಾಗಿ ಉಳಿಯಬಾರದು. ಅವುಗಳ ಮೂಲಕ ಸಾರ್ವಜನಿಕರಿಗೆ ಮತ್ತು ಕೈಗಾರಿಕಾ ವಲಯಕ್ಕೆ ನಿರಂತರ ವಿಮಾನ ಸೇವೆಗಳು ಲಭ್ಯವಾಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ” ಎಂದರು.
ಎಂಆರ್ಒ ಸೇವೆಗಳಿಗೆ ಆದ್ಯತೆ, ಫ್ರಾನ್ಸ್ನಲ್ಲಿ ರೋಡ್-ಶೋ:
ವಿಮಾನಯಾನ ಕ್ಷೇತ್ರದಲ್ಲಿ ಪ್ರಸ್ತುತ ವಿಮಾನಗಳ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ (MRO) ಸೇವೆಗಳಿಗೆ ಭಾರಿ ಬೇಡಿಕೆಯಿದೆ. ಹೀಗಾಗಿ ನೂತನ ನೀತಿಯಲ್ಲಿ ವಿಮಾನ ತಯಾರಿಕೆಯ ಜೊತೆಗೆ ಬಿಡಿಭಾಗಗಳ ಉತ್ಪಾದನೆ ಮತ್ತು ಸಂಪೂರ್ಣ ಪೂರೈಕೆ ಸರಪಳಿಯ (Supply Chain) ಬೆಳವಣಿಗೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ (GIM) ಮುನ್ನ ಪೂರೈಕೆದಾರರ ಸಮಾವೇಶ ನಡೆಸಲಾಗುವುದು. ರಾಜ್ಯದಲ್ಲಿ ಈಗಾಗಲೇ ಕಾಲಿನ್ಸ್, ಡೈನಮ್ಯಾಟಿಕ್ಸ್, ಸಾಫ್ರಾನ್, ಏಕಸ್, ಬೆಲಾಟ್ರಿಕ್ಸ್ನಂತಹ ಪ್ರತಿಷ್ಠಿತ ವೈಮಾಂತರಿಕ್ಷ ಕಂಪನಿಗಳಿವೆ. ಫ್ರಾನ್ಸ್ ಸೇರಿದಂತೆ ಹಲವೆಡೆ ರಾಜಕೀಯ ಪರಿಸ್ಥಿತಿ ಬದಲಾಗಿರುವ ಹಿನ್ನೆಲೆಯಲ್ಲಿ, ಬಂಡವಾಳ ಆಕರ್ಷಿಸಲು ಫ್ರಾನ್ಸ್ನಲ್ಲಿ ಮತ್ತೊಂದು ಸುತ್ತಿನ ರೋಡ್-ಶೋ ನಡೆಸಲಾಗುವುದು ಎಂದು ಪಾಟೀಲ ವಿವರಿಸಿದರು.
ಉಡಾನ್ ನೀತಿಯ ದೋಷದಿಂದ ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಗಿತ:
ಶಿವಮೊಗ್ಗ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಂಡಿರುವುದಕ್ಕೆ ರಾಜ್ಯ ಸರ್ಕಾರ ಕಾರಣವಲ್ಲ, ಬದಲಾಗಿ ಕೇಂದ್ರ ಸರ್ಕಾರದ ದೋಷಪೂರಿತ ‘ಉಡಾನ್’ (UDAN) ನೀತಿಯೇ ನೇರ ಹೊಣೆ ಎಂದು ಸಚಿವರು ಸ್ಪಷ್ಟಪಡಿಸಿದರು. “ನಮ್ಮ ವಿರುದ್ಧ ಪದೇಪದೆ ಆರೋಪ ಮಾಡುವ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಉಡಾನ್ ಯೋಜನೆಯ ಅವಧಿಯನ್ನು 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಬೇಕು. ಆ ಬಳಿಕದ ಐದು ವರ್ಷಗಳವರೆಗೆ ಶೇಕಡ 50ರಷ್ಟು ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಈ ವಿಚಾರವನ್ನು ಸಂಸದರು ಪ್ರಧಾನಿ ಮೋದಿ ಮತ್ತು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರಿಗೆ ಮನದಟ್ಟು ಮಾಡಿಕೊಡಲಿ” ಎಂದು ಆಗ್ರಹಿಸಿದರು.
ಎಚ್.ಡಿ. ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ:
ರಾಜ್ಯದಲ್ಲಿ ಕೈಗಾರಿಕೆಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ತಳ್ಳಿಹಾಕಿದ ಎಂ.ಬಿ. ಪಾಟೀಲ, “ಕುಮಾರಸ್ವಾಮಿ ಅವರ ಆರೋಪಗಳು ಸಂಪೂರ್ಣ ಆಧಾರರಹಿತ. ಅವರಿಗೆ ರಾಜ್ಯಕ್ಕೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ ಸುಮ್ಮನಾದರೂ ಇರಲಿ. ಹೀರೋ ಕಂಪನಿಯ ವಿಚಾರದಲ್ಲಿ ಅವರು ಹಸಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ್ದಾರೆ; ವಾಸ್ತವದಲ್ಲಿ ಆ ಕಂಪನಿಯವರು ಅವರನ್ನು ಭೇಟಿಯೇ ಆಗಿಲ್ಲ” ಎಂದು ತಿರುಗೇಟು ನೀಡಿದರು.
ಪ್ರೋತ್ಸಾಹಧನ ಹಾಗೂ ಸೆಮಿಕಂಡಕ್ಟರ್ ಯೋಜನೆಗಳ ಸ್ಪಷ್ಟನೆ:
ನಮ್ಮ ರಾಜ್ಯದ ಕೈಗಾರಿಕಾ ನೀತಿಯಡಿ ಶೇಕಡ 35ರಿಂದ 40ರವರೆಗೆ ರಿಯಾಯಿತಿ ನೀಡಲು ಅವಕಾಶವಿದ್ದು, ಫಾಕ್ಸ್ಕಾನ್ ಕಂಪನಿಗೆ ಅದೇ ರೀತಿ ಸೌಲಭ್ಯ ನೀಡಲಾಗಿದೆ. ಆದರೆ, ಲೆನ್ಸ್ಕಾರ್ಟ್ ಕಂಪನಿಯು ತಾನು ಹೂಡಿಕೆ ಮಾಡುವ ಬಂಡವಾಳಕ್ಕಿಂತಲೂ ಹೆಚ್ಚಾಗಿ ಶೇಕಡ 120ರಷ್ಟು ಪ್ರೋತ್ಸಾಹಧನ ಕೇಳಿತ್ತು. ಅಷ್ಟು ಪ್ರಮಾಣದ ರಿಯಾಯಿತಿ ನೀಡಲು ಸಾಧ್ಯವಿಲ್ಲ ಎಂದು ಪಾಟೀಲ ಸ್ಪಷ್ಟಪಡಿಸಿದರು.
“ಹಲವು ಸೆಮಿಕಂಡಕ್ಟರ್ ಕಂಪನಿಗಳು ಕರ್ನಾಟಕಕ್ಕೆ ಬರಲು ಆಸಕ್ತಿ ತೋರಿದ್ದವು. ಆದರೆ, ಕೇಂದ್ರ ಸರ್ಕಾರ 50 ಸಾವಿರ ಕೋಟಿ ರೂ. ಹಾಗೂ ಗುಜರಾತ್ ಸರ್ಕಾರ 30 ಸಾವಿರ ಕೋಟಿ ರೂ. ಭಾರಿ ಅನುದಾನ ನೀಡಿ ಆ ಕಂಪನಿಗಳನ್ನು ಗುಜರಾತ್ಗೆ ಸೆಳೆದುಕೊಂಡವು. ಇಂತಹ ಪೈಪೋಟಿಯ ನಡುವೆಯೂ ಲ್ಯಾಮ್ ರೀಸರ್ಚ್, ಅಪ್ಲೈಡ್ ಮೆಟೀರಿಯಲ್ಸ್ನಂತಹ ಜಾಗತಿಕ ದಿಗ್ಗಜ ಸೆಮಿಕಂಡಕ್ಟರ್ ಕಂಪನಿಗಳನ್ನು ರಾಜ್ಯಕ್ಕೆ ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ” ಎಂದರು.
ಕೇಂದ್ರ ಬರ ಪರಿಹಾರ ಬಿಡುಗಡೆ ಮಾಡಲಿ:
ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ನಿಯಮಾವಳಿ ಪ್ರಕಾರ ಕೇಂದ್ರ ಸರ್ಕಾರ ತಕ್ಷಣವೇ ಬರ ಪರಿಹಾರ ಬಿಡುಗಡೆ ಮಾಡಬೇಕು. ಈ ವಿಚಾರದಲ್ಲಿ ಕೇಂದ್ರ ತಾರತಮ್ಯ ಮಾಡುತ್ತಿದೆ. ಹಿಂದೆ ಸಚಿವ ಕೃಷ್ಣ ಬೈರೇಗೌಡರು ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದಿತ್ತು. ಈ ಬಾರಿ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ ಎಂದು ಸಚಿವ ಪಾಟೀಲ ಒತ್ತಾಯಿಸಿದರು.




