ಬೆಂಗಳೂರು: ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ (Karnataka Primary School Teacher) ಹಳೆಯ ಪಿಂಚಣಿ ಯೋಜನೆ (Old Pension Scheme – OPS) ಕಲ್ಪಿಸುವ ವಿಚಾರದಲ್ಲಿ ಶಾಲಾ ಶಿಕ್ಷಣ ಇಲಾಖೆಯು ಅಂತಿಮ ಹಂತದ ಕಸರತ್ತು ಆರಂಭಿಸಿದೆ. 2006ಕ್ಕಿಂತ ಮುಂಚಿತವಾಗಿ ನೇಮಕಾತಿ ಅಧಿಸೂಚನೆ ಹೊರಬಿದ್ದಿದ್ದರೂ, ಇದುವರೆಗೂ ಒಪಿಎಸ್ ಸೌಲಭ್ಯ ದೊರೆಯದ ಅರ್ಹ ಶಿಕ್ಷಕರ ಸಮಗ್ರ ಪಟ್ಟಿಯನ್ನು ತುರ್ತಾಗಿ ಕಳುಹಿಸಿಕೊಡುವಂತೆ ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯವು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ (DDPI) ಅಧಿಕೃತ ಸುತ್ತೋಲೆ ರವಾನಿಸಿದೆ.
2006ರ ಮೊದಲಿನ ನೇಮಕಾತಿದಾರರಿಗೆ ಓಪಿಎಸ್ ಅನ್ವಯ
2005-06 ಮತ್ತು 2006-07ನೇ ಸಾಲಿನಲ್ಲಿ ಪ್ರಕಟವಾದ ನೇಮಕಾತಿ ಅಧಿಸೂಚನೆಗಳ ಅನ್ವಯ ಆಯ್ಕೆಯಾಗಿ, 2006ರ ಏಪ್ರಿಲ್ 1ರ ನಂತರ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರಿಗೆ ಹಳೆಯ ಪಿಂಚಣಿ ಯೋಜನೆಯನ್ನು ವಿಸ್ತರಿಸಲು ಸರ್ಕಾರ ಈಗಾಗಲೇ ಹಸಿರು ನಿಶಾನೆ ತೋರಿದೆ. ಆರ್ಥಿಕ ಇಲಾಖೆಯ ಒಪ್ಪಿಗೆಯೊಂದಿಗೆ ಈ ಸಂಬಂಧ ಹಂತಹಂತವಾಗಿ ಸರ್ಕಾರಿ ಆದೇಶಗಳನ್ನು ಸಹ ಹೊರಡಿಸಲಾಗಿದೆ.
ಅರ್ಹರು ವಂಚಿತರಾಗದಂತೆ ಇಲಾಖೆ ಕ್ರಮ
ಸರ್ಕಾರದ ಆದೇಶಗಳ ಬಳಿಕವೂ ಜಿಲ್ಲಾ ಮಟ್ಟದಿಂದ ನಿರಂತರವಾಗಿ ಪ್ರಸ್ತಾವನೆಗಳು ಬರುತ್ತಲೇ ಇದ್ದು, ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಇದರಿಂದ ಅರ್ಹ ಶಿಕ್ಷಕರು ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿತ್ತು. ಈ ಗೊಂದಲಗಳಿಗೆ ಪೂರ್ಣವಿರಾಮ ಇಡಲು ಮುಂದಾಗಿರುವ ಇಲಾಖೆ, ಇಡೀ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಇತ್ಯರ್ಥಪಡಿಸಲು ನಿರ್ಧರಿಸಿದೆ.
ದಾಖಲೆಗಳೊಂದಿಗೆ ಶಿಫಾರಸು ಕಳುಹಿಸಲು ಕಟ್ಟುನಿಟ್ಟಿನ ಆದೇಶ
ನಿಯಮಾವಳಿ ಪ್ರಕಾರ ಅರ್ಹತೆ ಹೊಂದಿರುವ ಯಾವುದೇ ಪ್ರಾಥಮಿಕ ಶಿಕ್ಷಕರು ಬಾಕಿ ಉಳಿದಿದ್ದರೆ, ಅಂತಹವರ ಸೇವಾ ವಿವರ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ಶಿಫಾರಸಿನೊಂದಿಗೆ ತಕ್ಷಣವೇ ಕೇಂದ್ರ ಕಚೇರಿಗೆ ಸಲ್ಲಿಸಬೇಕು. ಯಾವುದೇ ಲೋಪವಿಲ್ಲದೆ ನಿಗದಿತ ಅವಧಿಯೊಳಗೆ ವರದಿ ರವಾನಿಸುವಂತೆ ಡಿಡಿಪಿಐಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಲಾಗಿದೆ.



