ಕಲ್ಯಾಣ ಕರ್ನಾಟಕದ 80 ಗ್ರೆಡ್ 1 ಕಾರ್ಯದರ್ಶಿಗಳಿಗೆ ಪಿಡಿಓ ಬಡ್ತಿ: ಸಚಿವ ಈಶ್ವರ್ ಖಂಡ್ರೆ

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಸ್ಥಳೀಯ ವೃಂದದ ಕಾರ್ಯದರ್ಶಿ ಗ್ರೇಡ್-1 ಅಧಿಕಾರಿಗಳಿಗೆ ಪಿಡಿಒ ಆಗಿ ಮುಂಬಡ್ತಿ ನೀಡಲಾಗಿದ್ದು, ಇಂದು ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯೋಜನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಚಾಲನೆ ನೀಡಿದರು.

ಗಾಂಧೀನಗರದಲ್ಲಿರುವ ಇಲಾಖೆಯ ಆಯುಕ್ತಾಲಯದಲ್ಲಿ ನಡೆದ ಈ ಕೌನ್ಸೆಲಿಂಗ್ ನಲ್ಲಿ ಪಿಡಿಓ ಆಗಿ ಬಡ್ತಿ ಪಡೆದ 80 ಗ್ರೇಡ್ 1 ಕಾರ್ಯದರ್ಶಿಗಳು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಖಂಡ್ರೆ, ಗ್ರಾಮಗಳಲ್ಲಿ ಶಾಶ್ವತ ಮತ್ತು ಗುಣಮಟ್ಟದ ಆಸ್ತಿ ಸೃಜಿಸುವಲ್ಲಿ ಹಾಗೂ ದೇಶದ ಆತ್ಮವಾದ ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಓ ಮತ್ತು ಕಾರ್ಯದರ್ಶಿಗಳು ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.

ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಭಾರತದ ಜೀವನಾಡಿ. ಆದರೆ ಇಂದು ಗ್ರಾಮೀಣ ಯುವಕರು ನಗರಗಳಿಗೆ ಹೋಗಿ ನೆಲೆಸುತ್ತಿದ್ದು, ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತನೆ ಆಗುತ್ತಿವೆ. ತಮ್ಮ ಗ್ರಾಮದಲ್ಲೇ ಯುವಜನರಿಗೆ ಉದ್ಯೋಗ ಮತ್ತು  ಮೂಲಭೂತ ಸೌಕರ್ಯ ಕಲ್ಪಿಸಿದರೆ, ಗ್ರಾಮಾಭಿವೃದ್ದಿಯೂ ಆಗುತ್ತದೆ. ವಲಸೆಯೂ ನಿಲ್ಲುತ್ತದೆ ಎಂದರು.

ಕಾರ್ಯದರ್ಶಿ ಮತ್ತು ಪಿಡಿಓಗಳು ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ, ಗಾಂಧೀ ಕಂಡ ಗ್ರಾಮ ರಾಜ್ಯದ ಕನಸು ನನಸಾಗುತ್ತದೆ ಎಂದರು. ಬಡ್ತಿ ಪಡೆದು ಸ್ಥಳ ನಿಯುಕ್ತಿ ಪಡೆದ ಪಿಡಿಓಗಳಿಗೆ ಅವರು ಶುಭ ಕೋರಿದರು.