ಯುಜಿ‌ ನೀಟ್ ಪರೀಕ್ಷೆಯ 3ನೇ ಸುತ್ತಿನ‌ ತಾತ್ಕಾಲಿಕ ಫಲಿತಾಂಶ ಪ್ರಕಟ

PGCET Counselling KEA gives the green signal to enter all four choices

ಬೆಂಗಳೂರು: ಯುಜಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಮೂರನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದೆ.

ಎಂಸಿಸಿ ಮತ್ತು ಕೆಇಎ- ಎರಡೂ ಕಡೆ ಸೀಟು ಪಡೆದು, ಮೂರನೇ ಸುತ್ತಿನಲ್ಲಿ ಎಂಸಿಸಿ ಸೀಟಿಗೆ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅ.5ರಂದು ಮಧ್ಯಾಹ್ನ 12 ಗಂಟೆಯೊಳಗೆ ವೆಬ್ ಸೈಟ್ ನ‌ ಲಿಂಕ್ ನಲ್ಲಿ ಚಾಯ್ಸ್- 4 ಹಾಕಿ ಕೌನ್ಸೆಲಿಂಗ್ ನಿಂದ‌ ಉಚಿತವಾಗಿ ಹೊರ ಹೋಗಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

ಕೆಇಎ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಎಂಸಿಸಿ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಅಲ್ಲಿ ಪ್ರವೇಶ ಪಡೆಯಲು ಇಚ್ಛೆ ಇದ್ದಲ್ಲಿ ಅ.5ರಂದು ಮಧ್ಯಾಹ್ನ 12 ಗಂಟೆಯೊಳಗೆ 10 ಸಾವಿರ ರೂಪಾಯಿ ದಂಡ ಕಟ್ಟಿ ಕೆಇಎ ಸೀಟು ರದ್ದುಪಡಿಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.

ಇತರ ರಾಜ್ಯಗಳಲ್ಲಿ 3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ, ಅಲ್ಲಿ ಪ್ರವೇಶ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಥವಾ ಸಿಕ್ಕಿರುವ ಸೀಟು ಇಷ್ಟ ಇಲ್ಲದೆ ಕೌನ್ಸೆಲಿಂಗ್ ನಿಂದ ಹೊರ‌ ಹೋಗುವವರು ಕೆಇಎ 3ನೇ ಸುತ್ತಿನ ಸೀಟನ್ನು‌ 10 ಸಾವಿರ ರೂಪಾಯಿ ದಂಡ ಪಾವತಿಸಿ ರದ್ದುಪಡಿಸಿಕೊಳ್ಳಬಹುದು. ಇದಕ್ಕೂ ಅ. 5ರ‌ ಮಧ್ಯಾಹ್ನ 12 ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದರು.

ಎಂಸಿಸಿ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಪ್ರವೇಶ ಪಡೆದಿರುವ ಅಭ್ಯರ್ಥಿಗಳು, ಕೆಇಎ 3ನೇ ಸುತ್ತಿನಲ್ಲಿ ಸೀಟು ಪಡೆದು, ಅಲ್ಲಿಯೇ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹವರು ಅ.5ರಂದು ಮಧ್ಯಾಹ್ನ 12 ಗಂಟೆಯೊಳಗೆ ಪೂರ್ಣ ವಿವರಗಳೊಂದಿಗೆ ಇ-ಮೇಲ್ (keauthority_ka@nic.in) ಮಾಡಬೇಕು. ಅಂತಹವರನ್ನು ಕೆಇಎ ಕೌನ್ಸೆಲಿಂಗ್ ಪಟ್ಟಿಯಲ್ಲೇ ಉಳಿಸಲಾಗುವುದು ಎಂದರು.

ಸೀಟು ರದ್ದುಪಡಿಸಿಕೊಂಡು ಕೌನ್ಸೆಲಿಂಗ್ ನಿಂದ ಹೊರ‌ ಹೋದವರಿಗೆ ನಂತರದ ಸುತ್ತುಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದೂ ಅವರು ಎಚ್ಚರಿಸಿದ್ದಾರೆ.

ರದ್ದುಪಡಿಸಿಕೊಂಡ ನಂತರ ಉಳಿದ ಸೀಟುಗಳನ್ನು ಪುನಃ ಇದೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಿ, ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಸುತ್ತಿನ ನಂತರ ಚಾಯ್ಸ್-4 ಆಯ್ಕೆಗೆ ಅವಕಾಶ ಇರುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ನೋಡಬಹುದು ಎಂದು ಅವರು‌ ವಿವರಿಸಿದ್ದಾರೆ.