ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಅಶ್ಲೀಲ ಹಾಗೂ ಅವಾಚ್ಯ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಕ್ಷಮೆಯಾಚಿಸಿದರೂ, ಪ್ರಕರಣ ಹಿಂಪಡೆಯಲು ರಮ್ಯಾ ನಿರಾಕರಿಸಿದ್ದಾರೆ.
ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಆರೋಪಿಗಳು ರಮ್ಯಾ ಅವರ ಬಳಿ ಕ್ಷಮೆ ಕೋರಿ, ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮನವಿ ಮಾಡಿದ್ದಾರೆ. ಆರೋಪಿಗಳು ಕಣ್ಣೀರಿಟ್ಟು ಕ್ಷಮೆ ಕೇಳಿದ್ದು, ಕೆಲವರು ರಮ್ಯಾ ಅವರ ಕಾಲಿಗೆ ಬಿದ್ದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ರಮ್ಯಾ ತಮ್ಮ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ.
‘ಪ್ರಕರಣ ಹಿಂಪಡೆಯುವ ಪ್ರಶ್ನೆಯೇ ಇಲ್ಲ’
ಮೊಬೈಲ್ ಹಾಗೂ ಇಂಟರ್‌ನೆಟ್ ಸೌಲಭ್ಯವಿದೆ ಎಂಬ ಕಾರಣಕ್ಕೆ ಯಾರ ವಿರುದ್ಧ ಬೇಕಾದರೂ ಅಶ್ಲೀಲ ಹಾಗೂ ಅವಾಚ್ಯವಾಗಿ ಕಾಮೆಂಟ್ ಮಾಡಬಹುದೇ ಎಂದು ರಮ್ಯಾ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದ ಟ್ರೋಲ್ ಮತ್ತು ಸೈಬರ್ ದೌರ್ಜನ್ಯದ ವಿರುದ್ಧ ತಮ್ಮ ಕಾನೂನು ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ. ನ್ಯಾಯಾಲಯ ಎಷ್ಟು ಬಾರಿ ಸಾಕ್ಷ್ಯ ಹೇಳಲು ಕರೆದರೂ ಹಾಜರಾಗಲು ಸಿದ್ಧವಿದ್ದು, ಆದರೆ ಆರೋಪಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ರಮ್ಯಾ ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರ ವಿರುದ್ಧದ ಸೈಬರ್ ದೌರ್ಜನ್ಯಕ್ಕೆ ಕಡಿವಾಣ
ಈ ಪ್ರಕರಣ ಇತರರಿಗೆ ಪಾಠವಾಗಬೇಕು. ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮೊದಲು ಯೋಚಿಸುವಂತಾಗಬೇಕು ಎಂಬ ನಿಲುವನ್ನು ರಮ್ಯಾ ವ್ಯಕ್ತಪಡಿಸಿದ್ದಾರೆ.



